ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿರುವ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ಕೊಟ್ಟು ಪ್ರಕರಣಕ್ಕೆ ತೆರೆ ಎಳೆಯಲು ಆಡಳಿತ ಮಂಡಳಿ ನಿರ್ಧರಿಸಿದೆ.
ರ‍್ಯಾಗಿಂಗ್ ನಡೆದಿರುವ ಪ್ರಕರಣ ಬೆಳಕಿಗೆ ಬಂದ ನಂತರ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರ ಥಾಮಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಕಾಲೇಜಿಗೆ ಭೇಟಿ ನೀಡಿ ರ್ಯಾಗಿಂಗ್ ಪ್ರಕರಣದ ಬಗ್ಗೆ ಸರ್ಕಾರಿ ಕಾಲೇಜಿನ ಡೀನ್ ಡಾ.ಸಂಜೀವ್ ಹಾಗೂ ರ‍್ಯಾಗಿಂಗ್ ವಿರೋಧಿ ಸಮಿತಿಯ ಸದಸ್ಯರೊಡನೆ ಸಭೆ ನಡೆಸಿದರು.
Advertisement
ಈ ನಡುವೆ ರ‍್ಯಾಗಿಂಗ್ ಗೆ ಒಳಗಾದ ತುಮಕೂರು ಮೂಲದ ವಿದ್ಯಾರ್ಥಿಯ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರವೊಂದನ್ನು ಇ -ಮೇಲ್ ಮಾಡಿ ರ‍್ಯಾಗಿಂಗ್ ಮಾಡಿರುವ ವಿದ್ಯಾರ್ಥಿಗಳು ನಮ್ಮೂರಿನವರೇ ಆಗಿದ್ದು, ಯಾವುದೇ ಕ್ರಮ ಕೈಗೊಳ್ಳುವುದು ಬೇಡ, ಈ ಪ್ರಕರಣವನ್ನು ಇಲ್ಲಿಗೆ ಕೊನೆಗೊಳಿಸಿ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇಲ್ಲಿಗೆ ಮುಗಿಸಲಾಗುವುದು ಎಂದು ಸರ್ಕಾರಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ್ ತಿಳಿಸಿದ್ದಾರೆ.
Advertisement
ನಮ್ಮ ಕಾಲೇಜಿನಲ್ಲಿ ಎಂಬಿಬಿಎಸ್, ಬಿಎಸ್‍ಸಿ ನರ್ಸಿಂಗ್ ಹಾಗೂ ಅಲೈಡ್ ಸೈನ್ಸ್ ಸೇರಿದಂತೆ ಒಟ್ಟು 1,100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರಿಗೆಲ್ಲ ರ‍್ಯಾಗಿಂಗ್ ಪಿಡುಗಿನ ಆಗು-ಹೋಗುಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರ‍್ಯಾಗಿಂಗ್ ಕಾಯ್ದೆ ಬಗ್ಗೆ ವಿಶೇಷ ತರಗತಿಗಳ ಮೂಲಕ ತಿಳುವಳಿಕೆ ನೀಡಲು ನಿರ್ಧರಿಸಲಾಗಿದೆ. ಪ್ರತಿ ದಿನ ಒಂದು ಗಂಟೆಯಂತೆ ದಿನ ಬಿಟ್ಟು ದಿನ ಈ ವಿಶೇಷ ತರಗತಿಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
Advertisement
ರ‍್ಯಾಗಿಂಗ್ ನಡೆಸಿರುವ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿಲ್ಲ. ಆದರೆ ಈ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನವಾಗುವವರೆಗೆ ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡದಿಂದ ಹೊರಗಿರಬೇಕು ಸೂಚಿಸಲಾಗಿದೆ.