– ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು
ಶಿವಮೊಗ್ಗ: ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವನ್ನು ಪೋಷಕರಿಗೆ ನೀಡದೇ, ಬದುಕಿರುವ ಮಗುವಿನ ಪೋಷಕರಿಗೆ ಸಿಬ್ಬಂದಿ ನೀಡಿರುವ ಆಘಾತಕಾರಿ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಣೆಬೆಳಕೆರೆ ನಿವಾಸಿಗಳಾದ ಸುಮಾ, ಅಂಜನಪ್ಪ ದಂಪತಿಗೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿದೆ. ಅದೇ ದಿನ ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಾ, ಗೋಪಾಲಪ್ಪ ದಂಪತಿಗೂ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈ ವೇಳೆ ಸುಮಾ-ಅಂಜನಪ್ಪನವರ ಗಂಡು ಮಗು ಮೃತವಾಗಿದೆ. ಸುಮಾ, ಗೋಪಾಲಪ್ಪ ದಂಪತಿಯ ಹೆಣ್ಣು ಮಗು ಚಿಕಿತ್ಸೆಯಲ್ಲಿದೆ. ಗಂಡು ಮಗು ಮೃತವಾಗುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ ಮೃತ ಮಗುವನ್ನು ಸೊರಬದ ಸುಮಾ ಅವರಿಗೆ ನೀಡಿ ಕಳುಹಿಸಿದ್ದಾರೆ.
ಮೃತ ಮಗುವನ್ನು ಪಡೆದ ಸೊರಬದ ಸುಮಾ, ಗೋಪಾಲಪ್ಪ ದಂಪತಿ ಕಣ್ಣೀರು ಹಾಕುತ್ತಾ ಮಗುವನ್ನು ಪಡೆದುಕೊಂಡು ಆಸ್ಪತ್ರೆಯಿಂದ ತಮ್ಮ ಊರಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಇತ್ತ ಮಗು ನೋಡಲೆಂದು ತೀವ್ರ ನಿಗಾ ಘಟಕಕ್ಕೆ ಹೋದ ಸುಮಾ ಅಂಜನಪ್ಪನವರ ಪೋಷಕರಿಗೆ ವೈದ್ಯರು ನಿಮ್ಮ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಸುಮಾ ಅಂಜನಪ್ಪ ಅವರ ಮಗು ಜನಿಸಿದಾಗ ಮಗು ಒಂದೂವರೆ ಕೆ.ಜಿ ತೂಕ ಇದ್ದ ಕಾರಣ ಚಿಕಿತ್ಸೆಯಲ್ಲಿಡಲಾಗಿತ್ತು. ಸರಿ ಮೃತ ಮಗುವನ್ನು ನೀಡಿ ಎಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಎಡವಟ್ಟು ಹೊರಬಿದ್ದಿದೆ.
ಈ ವೇಳೆಗಾಗಲೇ ಸೊರಬದ ಸುಮಗೋಪಾಲಪ್ಪನವರು ಮಗುವನ್ನು ತಮ್ಮೂರಿಗೆ ತೆಗೆದು ಕೊಂಡು ಹೋಗಿ ಅಂತ್ಯಕ್ರಿಯೆಯನ್ನು ಸಹ ಮಾಡಿ ಮುಗಿಸಿದ್ದಾರೆ. ಆದರೆ ಅವರ ಮಗು ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದೆ. ಇದರಿಂದ ಕೋಪಗೊಂಡ ಸುಮಾ ಅಂಜನಪ್ಪ ಪೋಷಕರು ತಮಗೆ ಮಗು ಬೇಕು ಎಂದು ದೊಡ್ಡಪೇಟೆ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನಿರಾಕರಿಸಿದ್ದಾರೆ.
ಇತ್ತ ಮೃತಪಟ್ಟ ಮಗುವಿನ ದೇಹವು ಸಿಗದೆ ಸುಮಾ ಅಂಜನಪ್ಪ ಕುಟುಂಬ ಪರದಾಡುವಂತಾಗಿದೆ. ಇಬ್ಬರು ಮಗುವಿನ ತಾಯಂದಿರ ಹೆಸರು ಒಂದೇ ಆಗಿದ್ದರಿಂದ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಮಗುವನ್ನು ಬದಲಾವಣೆ ಮಾಡಿ ನೋವಿಗೆ ಕಾರಣರಾದವರನ್ನು ಅಮಾನತು ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಮೃತ ಮಗುವಿನ ಪೋಷಕರು ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.