ಬೆಳಗಾವಿ: ಬಿಮ್ಸ್ ಆಸ್ಪತ್ರೆಯ ಕಿರಿಯ ವೈದ್ಯನ ಮೇಲೆ ಮೃತ ಕೊರೊನಾ ಸೋಂಕಿತೆಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಉಸಿರಾಟ ತೊಂದರೆಯಿಂದ ಚಿಕ್ಕೋಡಿ ಮೂಲದ 36 ವರ್ಷದ ಮಹಿಳೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟಿದ್ದರು. ಈ ವೇಳೆ 150ಕ್ಕೂ ಹೆಚ್ಚು ಸಂಬಂಧಿಕರು ಕಿರಿಯ ವೈದ್ಯರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಖಂಡಿಸಿ ತಡರಾತ್ರಿ ಆಸ್ಪತ್ರೆಯಿಂದ ಹೊರಬಂದ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ ನಡೆಸಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ದಂಡಗಿ ಸಿಬ್ಬಂದಿಯ ಮನವೊಲಿಸುವ ಕಾರ್ಯ ಮಾಡಿದರು. ಅಲ್ಲದೇ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಯ ಬೇರೆ ರೋಗಿಗಳಿಗೆ ತೊಂದರೆಯಾಗಬಾರದೆಂದು ವೈದ್ಯಕೀಯ ಸಿಬ್ಬಂದಿ ತಮ್ಮ ಪ್ರತಿಭಟನೆ ವಾಪಸ್ ಪಡೆದರು. ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.