ಚಾಮರಾಜನಗರ: ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿಯ ಕುಟುಂಬಕ್ಕೆ ಬಿಎಸ್‍ವೈ ಭೇಟಿ ನೀಡಿ 5 ಲಕ್ಷ ರೂ. ಪರಿಹಾರವನ್ನು ನೀಡಿದ್ದಾರೆ.
ಚಾಮರಾಜಗರದ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮ ಅಭಿಮಾನಿ ರವಿ ಬಿಸ್‍ವೈ ರಾಜೀನಾಮೆ ಕೊಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಇಂದು ಮೃತ ಅಭಿಮಾನಿ ಮನೆಗೆ ಬಿಸ್‍ವೈ ಭೇಟಿಕೊಟ್ಟಿದ್ದಾರೆ.
ರವಿ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಇದರಲ್ಲಿ 5 ಲಕ್ಷ ರೂಪಾಯಿ ಹಣವಿದೆ ಇಟ್ಟುಕೊಳ್ಳಿ. ನಾನು ಇನ್ನು 5 ಲಕ್ಷ ರೂಪಾಯಿ ಹಣವನ್ನು ಕಳುಹಿಸುತ್ತೇನೆ ಮನೆಯನ್ನು ಕಟ್ಟಿಸಿಕೊಳ್ಳಿ ಎಂದು ಹೇಳಿ ಅಭಿಮಾನಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ನೀಡಿದ್ದಕ್ಕೆ ಬೊಮ್ಮಲಾಪುರದ ರವಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಇಡೀ ಕುಟುಂಬ ರವಿ ಆಗಲಿಕೆಯಿಂದ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇದನ್ನೂ ಓದಿ: ಬಿಎಸ್‍ವೈ ರಾಜೀನಾಮೆ – ನೇಣಿಗೆ ಶರಣಾದ ಅಭಿಮಾನಿ
ಯಡಿಯೂರಪ್ಪ ಪಕ್ಕಾ ಅಭಿಮಾನಿಯಾಗಿದ್ದ ರವಿ ಮನೆಯ ಮುಂದೆ ಬಿಎಸ್‍ವೈ ಫೋಟೋ ಅಳವಡಿಸಿ ಅಭಿಮಾನ ತೋರಿಸಿದ್ದರು. ಅಲ್ಲದೇ ಮನೆಗೆ ಆಧಾರ ಸ್ಥಂಭವಾಗಿದ್ದ ರವಿ ಆಗಲಿಕೆ ಕುಟುಂಬಸ್ಥರಿಗೆ ನೋವುಂಟು ಮಾಡಿದೆ. ಮುಂದೆ ಹೇಗೆ ಜೀವನ ನಡೆಸುವುದು ಅಂತಾ ತೋಚದಾಗಿದೆ.
ಇದೀಗ ನಮ್ಮ ರವಿ ತೀರಿಕೊಂಡಿದ್ದಾನೆ. ಮುಂದೆ ಏನು ಮಾಡೋದು? ಜೀವನ ಹೇಗೆ ನಡೆಸೋದು ಅಂತಾ ಗೊತ್ತಾಗ್ತಿಲ್ಲ ಅಂತಾ ರವಿ ಅಮ್ಮ, ಅಕ್ಕ ನೋವು ತೋಡಿಕೊಂಡಿದ್ದಾರೆ. ಜು.26ರಂದು ರವಿ ಮನನೊಂದು ಟಿವಿ ನೋಡುತ್ತಾ ದುಃಖಿತನಾಗಿದ್ದರು. ಎಲ್ಲರೂ ಕೂಡ ಊರಿನಲ್ಲಿ ರವಿ ಅವರನ್ನು ರಾಜಾಹುಲಿ ಅಂತಾ ಕರೆಯುತ್ತಿದ್ದರು.
ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದರು. ಬಿಎಸ್‍ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ ರವಿ ಹೋಟೆಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.