– ಆತಂಕಕ್ಕೀಡಾದ ಗ್ರಾಮದ ಜನ
ಲಕ್ನೋ: ಹಕ್ಕಿಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ತಿಂದು ಸುಮಾರು 6 ಬೀದಿ ಶ್ವಾನಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಪುರಾನ್ಪುರ್ ಪ್ರದೇಶದಲ್ಲಿ ನಡೆದಿದೆ. ಗುರುವಾರ 12ಕ್ಕೂ ಹೆಚ್ಚು ಕಾಗೆಗಳು ಹಕ್ಕಿಜ್ವರದಿಂದ ಶೇಷಪುರ್ ರಸ್ತೆಯಲ್ಲಿ ಮೃತಪಟ್ಟಿದ್ದವು. ಈ ಘಟನೆ ಇದೀಗ ಪುರಾನ್ಪುರ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದೆ.
Advertisement
ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಅಮಿದ್ ಅವರು ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಶೇರ್ ಪುರ್‍ನಲ್ಲಿ ಹಕ್ಕಿಜ್ವರದಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಒಂದು ವಾರದ ಹಿಂದೆ ಪುರಾನ್ಪುರ್ ಪೊಲೀಸ್ ಠಾಣೆಗೆ ವರದಿ ಸಲ್ಲಿಸಲಾಗಿತ್ತು.
Advertisement
ಬೀದಿ ಶ್ವಾನಗಳು ರಸ್ತೆಯಲ್ಲಿ ಸತ್ತು ಬಿದ್ದಿರುವುದನ್ನು ನೋಡಿದ ಸ್ಥಳೀಯರು, ಶ್ವಾನಗಳು ಹಕ್ಕಿ ಜ್ವರದಿಂದ ಮೃತಪಟ್ಟಿದ್ದ ಕಾಗೆಗಳನ್ನು ಸೇವಿಸಿ ಸಾವನ್ನಪ್ಪಿವೆ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಹಿರಿಯ ಪಶು ವೈದ್ಯಕೀಯ ಅಧಿಕಾರಿಗಳು ಗುರುವಾರ ಬಾರ್ಖೇರಾ ನಗರದ ಪಂಚಾಯತ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಕೋಳಿ ಮಾಂಸದ ಮಾದರಿಯನ್ನು ಪರೀಕ್ಷಿಸಲು ತೆಗೆದುಕೊಂಡಿದ್ದಾರೆ.
Advertisement
ಇದೇ ರೀತಿ ಬುಧವಾರ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 50 ಕಾಗೆಗಳು ಹಕ್ಕಿಜ್ವರದಿಂದ ಮೃತಪಟ್ಟಿದ್ದವು. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದಲ್ಲಿ ಹಕ್ಕಿಜ್ವರ ಇರುವುದನ್ನು ದೃಢಪಡಿಸಲಾಗಿದೆ.