– ಶವವನ್ನ ಬಿಟ್ಟುಹೋದ ಶ್ರದ್ಧಾಂಜಲಿ ವಾಹನ ಚಾಲಕ
– ಸಂಸ್ಕಾರ ಸ್ಥಳಕ್ಕೆ ತಡವಾಗಿ ಬಂದ ಅಧಿಕಾರಿಗಳು
ರಾಯಚೂರು: ಮೃತ ಕೊರೊನಾ ಸೋಂಕಿತನ ಅಂತ್ಯಸಂಸ್ಕಾರವನ್ನ ಸಂಬಂಧಿಕರೇ ಮಾಡಿದ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಆನೆಹೊಸೂರಿನಲ್ಲಿ ನಡೆದಿದೆ.
Advertisement
ಕೋವಿಡ್ ನಿಯಮಾನುಸಾರ ಮಾಡಬೇಕಾದ ಶವಸಂಸ್ಕಾರವನ್ನ ಮೃತನ ಸಂಬಂಧಿಕನೇ ಪಿಪಿಇ ಕಿಟ್ ಧರಿಸಿ ಗ್ರಾಮಸ್ಥರು, ಕುಟುಂಬಸ್ಥರ ಸಹಾಯದಿಂದ ಮಾಡಿದ್ದಾನೆ. ಜುಲೈ 21 ರಂದು ಮೃತ ಪಟ್ಟ ಕೊರೊನಾ ಸೋಂಕಿತನ ಅಂತ್ಯಸಂಸ್ಕಾರವನ್ನ ಜಿಲ್ಲಾಡಳಿತ ಮಾಡಲು ಮುಂದಾಗಿತ್ತು. ಆದರೆ ಮೃತನ ಕುಟುಂಬದವರು ಶವವನ್ನ ನೀಡುವಂತೆ ಕೇಳಿಕೊಂಡಿದ್ದರಿಂದ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಆದ್ರೆ ರಿಮ್ಸ್ ಆಸ್ಪತ್ರೆಯಿಂದ ಕೇವಲ ಚಾಲಕ ಮಾತ್ರ ಶವವನ್ನ ಗ್ರಾಮಕ್ಕೆ ತಂದು ಸಂಸ್ಕಾರದ ಸ್ಥಳದಲ್ಲಿ ಬಿಟ್ಟು ಹೋಗಿದ್ದಾನೆ. ರಿಮ್ಸ್ ನಿಂದ ಶವ ಸಾಗಿಸುವಾಗ ನಾಲ್ಕು ಜನ ಸಿಬ್ಬಂದಿ ಇದ್ದರು. ಆದರೆ ಸಂಸ್ಕಾರ ಸ್ಥಳಕ್ಕೆ ಬಂದಾಗ ಚಾಲಕ ಮಾತ್ರ ಇದ್ದ ಅಂತ ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
Advertisement
ಅಧಿಕಾರಿಗಳು ತಡವಾಗಿ ಬಂದ ಹಿನ್ನೆಲೆ ಮೃತನ ಕುಟುಂಬಸ್ಥರು ತಾವೇ ಅಂತಸಂಸ್ಕಾರ ಮಾಡಿದ್ದಾರೆ. ಲಿಂಗಸುಗೂರು ತಹಶೀಲ್ದಾರ್, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗಾಗಲೇ ಶವವನ್ನ ಗುಂಡಿಯಲ್ಲಿ ಇಳಿಸಲಾಗಿತ್ತು. ಕೊವಿಡ್ ಆಸ್ಪತ್ರೆಯಿಂದ ಶವ ಕಳುಹಿಸಿರುವ ಬಗ್ಗೆ ಮಾಹಿತಿ ತಡವಾಗಿದ್ದಕ್ಕೆ ವಿಳಂಬವಾಗಿದೆ. ನಾವು ಅಂತ್ಯಸಂಸ್ಕಾರದ ಸ್ಥಳಕ್ಕೆ ಹೋಗುವ ವೇಳೆಗಾಗಲೇ ಶವಸಂಸ್ಕಾರ ನಡೆದಿತ್ತು ಅಂತ ಲಿಂಗಸುಗೂರು ತಹಶೀಲ್ದಾರ್ ಚಾಮರಸ ಪಾಟೀಲ್ ಹೇಳಿದ್ದಾರೆ.
Advertisement
ಕೊವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಿಲ್ಲ ಅಂತ ಮೃತನ ಸಂಬಂಧಿಕರು ಆರೋಪ ಮಾಡಿದ್ದಾರೆ. ಶವವನ್ನ ಕೊಡುವಾಗಲೂ ತುಂಬಾ ಕಾಯಿಸಿದ್ದಾರೆ. ಸಾವಿಗೆ ಕಾರಣವನ್ನೂ ನಿಖರವಾಗಿ ಹೇಳಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದ 54 ವರ್ಷದ ವ್ಯಕ್ತಿ ಗ್ಯಾಂಗ್ರಿನ್, ಮಧುಮೇಹ, ಹೈಬಿಪಿಯಿಂದ ಬಳಲುತ್ತಿದ್ದ. ಸಾವಿಗೂ ಎರಡು ದಿನ ಮುಂಚೆ ನ್ಯೂಮೊನಿಯಾ ಇದೇ ಅಂತ ವೈದ್ಯರು ತಿಳಿಸಿದ್ದರು. ಜುಲೈ 14 ರಂದು ಕೋವಿಡ್ ಪಾಸಿಟಿವ್ ಧೃಡಪಟ್ಟಿತ್ತು, ಜುಲೈ 21 ರಂದು ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾನೆ.