– ಮೆಡಿಕಲ್ ಕಿಟ್, ಚಿತಾಗಾರ ಸಮಸ್ಯೆ, ರೆಮ್‍ಡಿಸಿವಿರ್ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ
ಬೆಂಗಳೂರು: ನಗರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಅಥವಾ ಕೋವಿಡ್‍ಯೇತರ ಕಾರಣದಿಂದ ಯಾರೇ ಮೃತಪಟ್ಟರೂ ಕೂಡಲೇ ಮೃತ ದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಬೇಕು. ಮೃತದೇಹ ನೀಡುವುದು ತಡವಾದರೆ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
Advertisement
ಶುಕ್ರವಾರ ಕೋವಿಡ್ ನಿರ್ವಹಣೆ ಸಂಬಂಧ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಸ್ಪತ್ರೆಯಿಂದ ಮೃತದೇಹವನ್ನು ಸಂಬಂಧಿಕರಿಗೆ ತಡವಾಗಿ ನೀಡುತ್ತಿರುವುದರಿಂದ ಚಿತಾಗಾರಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಒಮ್ಮೆಗೇ ಮೃತದೇಹಗಳನ್ನು ತರುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಸೂಚಿಸಿದರು.
Advertisement
ಮೃತರ ಸಂಬಂಧಿಕರು ಮೊದಲೇ ದುಃಖದಲ್ಲಿರುತ್ತಾರೆ. ಅವರ ನೋವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಆಗಬಾರದು. ಕೂಡಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ಹಸ್ತಾಂತರ ಮಾಡಬೇಕು ಎಂದರು.
Advertisement
Advertisement
ಗ್ಯಾಸ್ ಚಿತಾಗಾರ:
ನಗರದ 13 ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಿರುವ ಕಾರಣ ಶವಸಂಸ್ಕಾರ ತಡ ಆಗುತ್ತಿದೆ. ಹೀಗಾಗಿ ಪ್ರಾಯೋಗಿಕವಾಗಿ ಸುಮ್ಮನಹಳ್ಳಿ ಮತ್ತು ಗಿಡ್ಡ ಹಳ್ಳಿಯಲ್ಲಿ ಗ್ಯಾಸ್ ಚಿತಾಗಾರಗಳನ್ನು ತುರ್ತಾಗಿ ತೆರೆಯಲು ಉದ್ದೇಶಿಸಲಾಗಿದೆ. ಇದು ಯಶಸ್ವಿಯಾದರೆ ಇತರೆಡೆಯೂ ಆ ವ್ಯವಸ್ಥೆ ಮಾಡಲಾಗುವುದು. ಪ್ರತಿ ಚಿತಾಗಾರಕ್ಕೂ 15 ಸ್ಟ್ರೆಚರ್‍ಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಚಿತಾಗಾರಕ್ಕೂ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆಗಳಿದ್ದರೆ ಬಗೆಹರಿಸುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.
Held an emergency meeting in Bengaluru with the Chief Minister’s Political Secretary, Shri @SRVishwanathBJP, @BBMPCOMM and senior officials on the current situation.
1/4 pic.twitter.com/5ig7OioeeL
— Dr. Ashwathnarayan C. N. (@drashwathcn) April 23, 2021
ಪ್ರತಿ ಆರೋಗ್ಯ ಸೇವಾ ಕೇಂದ್ರಕ್ಕೂ ಅನುದಾನ
ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರಿಗೆ, ಅದರಲ್ಲೂ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊಡಮಾಡುವ ಮೆಡಿಕಲ್ ಕಿಟ್ ಕೊರತೆ ಉಂಟಾಗಿದೆ. ಕೂಡಲೇ ಈ ಕಿಟ್‍ಗಳನ್ನು ಖರೀದಿ ಮಾಡಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತಲಾ 2 ಲಕ್ಷ ರೂ. ನೀಡಲಾಗಿದೆ. ಇದು ಸಾಕಾಗುವುದಿಲ್ಲ, ಹೀಗಾಗಿ ವಿಧಾನಸಭಾ ಕ್ಷೇತ್ರವಾರು, ಬಿಬಿಎಂಪಿ ವಿಭಾಗವಾರು ಇನ್ನೂ ಹೆಚ್ಚಿನ ಅನುದಾನ ಅಗತ್ಯ ಇದೆ. ತಕ್ಷಣ ಒದಗಿಸಬೇಕು ಎಂದು ಗೌರವ್ ಗುಪ್ತಾ ಅವರಿಗೆ ಸೂಚಿಸಿದರು. ಹಣ ಒದಗಿಸುವ ಭರವಸೆಯನ್ನು ಗುಪ್ತಾ ನೀಡಿದರು.
ಕೋವಿಡ್ ಸೋಂಕಿತರಿಗೆ ಎಲ್ಲಿಯೂ ರೆಮ್‍ಡಿಸಿವಿರ್ ಸೇರಿ ಯಾವುದೇ ಔಷಧ ಅಥವಾ ಕಿಟ್‍ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕೋವಿಡ್ ಸಹಾಯವಾಣಿ 1912 ಸಂಖ್ಯೆಗೆ ಕೆರೆಗಳು ಹೆಚ್ಚು ಬರುತ್ತಿವೆ. ಸಹಾಯವಾಣಿ ಕೇಂದ್ರದಲ್ಲಿ ಸದ್ಯಕ್ಕೆ ಕರೆ ಸ್ವೀಕರಿಸಲು 30 ಜನರಿದ್ದು, ಇನ್ನೂ 30 ಜನರನ್ನು ನಿಯೋಜಿಸುವಂತೆ ಸೂಚಿಸಿದ್ದೇನೆ. ಕರೆ ಮಾಡುವ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸಿ ಕೂಡಲೇ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ರಾಜ್ಯದಲ್ಲಿ 7 ಕಡೆ ಕೋವಿಡ್ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಅಲ್ಲಿಂದ ಲಸಿಕೆ ಬಂದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟು ಸಮರ್ಪಕವಾಗಿ ವಿತರಣೆ ಮಾಡಬೇಕು. ದೆಹಲಿಯಲ್ಲಿ ಆದಂತೆ ಯಾವುದೇ ರೀತಿಯಲ್ಲೂ ವ್ಯತ್ಯಯ ಆಗಬಾರದು. ರಾಜ್ಯದಲ್ಲಿ 280 ಆಸ್ಪತ್ರೆಗಳಿಂದ ರೆಮ್‍ಡಿಸಿವಿರ್ ಔಷಧಿಗೆ ಬೇಡಿಕೆ ಬಂದಿದೆ. ಬೇಡಿಕೆ ಅನುಸಾರ ಒದಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.
ಸಭೆಯಲ್ಲಿ ಗೌರವ್ ಗುಪ್ತಾ ಜೊತೆ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಔಷಧ ನಿಯಂತ್ರಣ ಇಲಾಖೆಯ ಉಪ ನಿರ್ದೇಶಕ ಸುರೇಶ್ ಹಾಗೂ ಇತರರು ಇದ್ದರು.