ಬೆಂಗಳೂರು: ಪ್ರಾಣಿಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೃಗಾಲಯಗಳನ್ನ ಉಳಿಸಿ ಬೆಳೆಸಿ ಎಂದು ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಮೈಸೂರು ಪ್ರಾಣಿಸಂಗ್ರಹಾಲಯದಲ್ಲಿ ನಿಂತು ವೀಡಿಯೋ ಮೂಲಕ ಮಾತನಾಡಿರುವ ದರ್ಶನ್ ಕೊರೊನಾದಿಂದ ಮಾನವಕುಲಕ್ಕಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಅನಾನುಕೂಲತೆ ಉಂಟಾಗಿದೆ. ಕರ್ನಾಟಕದಲ್ಲಿ 9 ಪ್ರಾಣಿಸಂಗ್ರಹಾಲಯಗಳಿವೆ. ಕೊರೊನಾದಿಂದಾ ಒಂದೂವರೆ ವರ್ಷದಿಂದ ಜನರು ಪ್ರಾಣಿಸಂಗ್ರಹಾಲಯಕ್ಕೆ ಬರ್ತಿಲ್ಲ, ಪ್ರಾಣಿಗಳ ಆರೈಕೆ ನಡೆಯುತ್ತಿಲ್ಲ. ಆದರೆ ಈ ಜೀವ ಸಂಕುಲ ಉಳಿಸಿಕೊಳ್ಳಲು ನೀವು ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆಯಬೇಕು ಎಂದಿದ್ದಾರೆ. ಮೃಗಾಲಯಗಳನ್ನ ಉಳಿಸಿ ಬೆಳೆಸಿ ಎಂದು ವಿಶೇಷ ರೀತಿಯಲ್ಲಿ ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ದರ್ಶನ್ ಸಿನಿಮಾ ಚಿತ್ರೀಕರಣ ಬಿಡುವಿನ ವೇಳೆಯ ಹೆಚ್ಚಿನ ಸಮಯವನ್ನ ತೋಟದ ಮನೆಯಲ್ಲಿಯೇ ಕಳೆಯುತ್ತಾರೆ. ತಾವು ಸಾಕಿರುವ ಪ್ರಾಣಿಗಳ ಜೊತೆ ಸಮಯವನ್ನ ಕಳೆಯಲು ದರ್ಶನ್ ಇಷ್ಟಪಡುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಾಗಲೂ ಅಲ್ಲಿಯ ಪ್ರಾಣಿ ಸಾಕಾಣಿಕಾ ಕೇಂದ್ರಗಳಿಗೆ ಭೇಟಿ ನೀಡುವುದನ್ನ ದರ್ಶನ್ ಎಂದಿಗೂ ಮಿಸ್ ಮಾಡಿಕೊಳ್ಳಲ್ಲ.
ಕೆಲ ವರ್ಷಗಳ ಹಿಂದೆ ಮಗನ ಜೊತೆ ಮೈಸೂರಿನ ಮೃಗಾಲಯಕ್ಕೆ ದರ್ಶನ್ ಭೇಟಿ ನೀಡಿದ್ದರು. ತಾವು ದತ್ತು ಪಡೆದಿದ್ದ ಹುಲಿಯನ್ನು ಪುತ್ರನಿಗೆ ಪರಿಚಯಿಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದ ಗೋಶಾಲೆಗೆ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ದರ್ಶನ್ ಜೊತೆಯಾಗಿ ಮೇವು ದಾನ ನೀಡಿದ್ದರು.