– ನಾಲ್ವರ ಶವ ಬಾವಿಯಲ್ಲಿ ಪತ್ತೆ
ಜೈಪುರ್: ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ರಾಮ್‍ಸರ್‍ನಲ್ಲಿ ನಡೆದಿದೆ.
ಮೃತ ತಾಯಿ ಮತ್ತು ಮಕ್ಕಳು ರಾಮ್ಸರ್ ಗ್ರಾಮದ ನಿವಾಸಿಗಳಾಗಿದ್ದಾರೆ. ವಿಮ್ಲಾ(30) ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ತಾಯಿ ಮತ್ತು ಮೂವರು ಮಕ್ಕಳ ಶವವನ್ನು ಬೆಳಗ್ಗೆ ಬಾವಿಯಿಂದ ಹೊರತೆಗೆಯಲಾಗಿದೆ. ಮರಣೊತ್ತರ ಪರೀಕ್ಷೆಯ ನಂತರ ಪೊಲೀಸರು ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಬುಧವಾರ ಸಂಜೆ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆವರೆಗೂ ತಾಯಿ ಮತ್ತು ಮಕ್ಕಳು ಮನೆಗೆ ಬಾರದೇ ಇರುವುದನ್ನು ಗಮನಿಸಿದ ಕುಟುಂಬಸ್ಥರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ.
ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ತಾಯಿ ಮತ್ತು ಮೂವರು ಮಕ್ಕಳ ಶವ ಬಾವಿಯಲ್ಲಿರುವುದು ಪತ್ತೆಯಾಗಿದೆ. ಆಗ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ಬಾವಿಯಿಂದ ಹೊರತೆಗೆಸಿ ಮರಣೋತ್ತರ ಪರೀಕ್ಷೆ ಮಾಡಿಸಿ ನಾಲ್ಕು ಶವಗಳನ್ನು ಕುಟುಂಬಸ್ಥರಿಗೆ ನೀಡಿದ್ದಾರೆ.
12 ವರ್ಷದ ಸುಖ ಸಂಸಾರ ಮಹಿಳೆಯದ್ದು. ಮೂವರು ಮಕ್ಕಳಿದ್ದಾರೆ. ಪತಿ-ಪತ್ನಿ ಚೆನ್ನಾಗಿದ್ದರು ಎಂದು ಮೃತ ಮಹಿಳೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರ ತನಿಖೆಯಿಂದ ತಾಯಿ ಮತ್ತು ಮೂರು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದು ಬರಬೇಕಿದೆ.