– ಬೆಟ್ಟದ ಮೇಲೆ ಹೋಂ ಸ್ಟೇ, ಮನೆ ಕಟ್ಟಿಕೊಳ್ಳಿ ಹಿಂದೇಟು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬ್ರಹ್ಮಗಿರಿ ಬೆಟ್ಟ ಅಪ್ಪಳಿಸಿ ಅರ್ಚಕರ ಮನೆ ನೆಲಸಮವಾಗಿ ನಾಲ್ವರು ಮೃತಪಟ್ಟಿದ್ದರು. ತಲಕಾವೇರಿಯಲ್ಲಿ ಆಗಿದ್ದ ಈ ದುರಂತದಲ್ಲಿ ಕಣ್ಮರೆ ಆಗಿರುವ ಇನ್ನಿಬ್ಬರು ಸುಳಿವು ಇನ್ನೂ ಸಿಕ್ಕಿಲ್ಲ. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಇನ್ನೂ ಕೆಲ ಗುಡ್ಡಗಳು ಕುಸಿಯುವ ಭೀತಿಯಲ್ಲಿವೆ.
Advertisement
ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ ಮೂರು ವರ್ಷಗಳಿಂದ ಆಗುತ್ತಿರುವ ಭೂಕುಸಿತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ಕೆಲವು ಬೆಟ್ಟಗಳಲ್ಲಿ ಮತ್ತೆ ಬಿರುಕುಬಿಟ್ಟಿದ್ದು, ಜನರು ನಿದ್ದೆಬಿಟ್ಟು ರಾತ್ರಿ ಇಡೀ ಪಾರಕಾಯುತ್ತಿದ್ದಾರೆ. ಬೆಟ್ಟದ ಮೇಲೆ ಮನೆ, ಹೋಂ ಸ್ಟೇ, ರೆಸಾರ್ಟ್ ಮಾಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ವ್ಯಾಪಾರಸ್ಥರು, ಕಳೆದ ಮೂರು ವರ್ಷಗಳಿಂದ ಆಗುತ್ತಿರುವ ಭೂಕುಸಿತದಿಂದ ಬೆಟ್ಟಗಳ ಸಹವಾಸವೇ ಬೇಡ ಎನ್ನುವಂತಾಗಿದೆ.
Advertisement
Advertisement
ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ತುದಿಯವರೆಗೆ ನೂರಾರು ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮೂರು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಳೆದ ವರ್ಷವೇ ಅಯ್ಯಪ್ಪ ಬೆಟ್ಟದಲ್ಲಿ ಭಾರೀ ಬಿರುಕು ಮೂಡಿತ್ತು. ಆಗಸ್ಟ್ ತಿಂಗಳು ಕಳೆದ ನಂತರ ಮಳೆ ಕಡಿಮೆ ಆಗಿದ್ದರಿಂದ ಅಲ್ಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದರು. ಈ ವರ್ಷವೂ ಆಗಸ್ಟ್ ಆರಂಭದಿಂದಲೂ ಭಾರೀ ಮಳೆಯಾಗುತ್ತಿದ್ದು, ಬೆಟ್ಟದ ಹಲವೆಡೆ ಸಣ್ಣ ಪ್ರಮಾಣದಲ್ಲಿ ಕುಸಿದಿದೆ.
Advertisement
ಕಳೆದ ಬಾರಿ ಬೆಟ್ಟ ಬಿರುಕು ಬಿಟ್ಟ ಜಾಗಕ್ಕೆ ಸಿಮೆಂಟ್ ಹಾಕಿ ಮುಚ್ಚಲಾಗಿತ್ತು. ಈ ಬಾರಿ ಬೆಟ್ಟದ ಮೇಲಿರುವ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿದ್ದು, ಜನರು ನಿದ್ದೆಬಿಟ್ಟು ರಾತ್ರಿ ಇಡೀ ಪಾರಕಾಯುತ್ತಿದ್ದಾರೆ. ಅದರಲ್ಲೂ ಕಳೆದ ಬಾರಿ ಇದೇ ರೀತಿ ಬಿರುಕು ಬಿಟ್ಟು ಕೆಲವು ದಿನಗಳ ಹಿಂದೆಯಷ್ಟೇ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಬಿದ್ದು ಅರ್ಚಕರ ಕುಟುಂಬ ನಾಪತ್ತೆಯಾಗಿತ್ತು. ಈ ದುರಂತದಿಂದ ಬೆಚ್ಚಿಬಿದ್ದಿರುವ ಅಯ್ಯಪ್ಪ ಬೆಟ್ಟದ ನಿವಾಸಿಗಳು ಹಗಲು ರಾತ್ರಿ ಆತಂಕದಲ್ಲೇ ಬದುಕುತ್ತಿದ್ದಾರೆ.
ವರ್ಷದ ಹಿಂದೆ ಈ ಬೆಟ್ಟ ಬಿರುಕು ಬಿಟ್ಟಾಗ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಬಳಿಕ ಸಿಮೆಂಟ್ ಹಾಕಿ ಬಿರುಕಿಗೆ ನೀರು ಹೋಗದಂತೆ ಮುಚ್ಚಲಾಗಿತ್ತು. ಆದರೆ ಇದೀಗ ಬೆಟ್ಟ ಅಲ್ಲಲ್ಲಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಎಲ್ಲ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಚಿಂತಿಸಲಾಗಿದೆ. ಮುಂದಿನ ಮಳೆಗಾಲದ ಹೊತ್ತಿಗೆ ಶಾಶ್ವತ ಪರಿಹಾರ ಒದಗಿಸಲಾಗುದು ಎಂದು ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಭರವಸೆ ನೀಡಿದ್ದಾರೆ.