– ಬಣಗುಡುತ್ತಿವೆ ಹೋಟೆಲ್, ಬಸ್‍ಗಳು
ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಸ್ಪೋಟಗೊಳ್ಳುತ್ತಿರವ ಹಿನ್ನೆಲೆ ಜನ ರಸ್ತೆಗಿಳಿಯುವ ಪ್ರಮಾಣದಲ್ಲಿ ಭಾರೀ ಇಳಿತ ಕಂಡಿದೆ. ವಾರದ ಏಳು ದಿನಗಳಲ್ಲಿಯೂ ನಗರದ ಎಲ್ಲ ವಲಯಗಳ ವ್ಯಾಪಾರ-ವಹಿವಾಟು ಕುಂಟುತ್ತ ಸಾಗಿದೆ.
ಜಿಲ್ಲೆಯಲ್ಲಿ 787 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದೆ. ಇದರದಿಂದ ಜಿಲ್ಲೆಯ ಜನ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುವುದನ್ನು ಕಡಿಮೆ ಮಾಡಿದ್ದಾರೆ. ಶೇ.50ಕ್ಕಿಂತಲೂ ಕಡಿಮೆ ಜನ ಬಸ್ ಪ್ರಯಾಣ ಮಾಡದೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಯಾದಗಿರಿಯ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿಯಾಗಿ, ಬಿಕೋ ಎನ್ನುತ್ತಿದೆ.
ಈಶಾನ್ಯ ಸಾರಿಗೆ ಸಂಸ್ಥೆಯ 87 ಬಸ್‍ಗಳು ಪ್ರತಿ ದಿನ ಜಿಲ್ಲೆ ಮತ್ತು ಅಂತರ್ ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿವೆ. ಆದರೆ ಜನ ಮಾತ್ರ ಕೊರೊನಾ ಭೀತಿಯಿಂದ ಬಸ್ ಹತ್ತುವುದನ್ನು ಕಡಿಮೆ ಮಾಡಿದ್ದಾರೆ. ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಯಾದಗಿರಿಯಿಂದ, ಬೆಂಗಳೂರು, ಕಲಬುರಗಿ, ವಿಜಯಪುರದ ಬಸ್‍ಗಳನ್ನು ಹತ್ತಲು ಭಯ ಪಡುತ್ತಿದ್ದಾರೆ.
ಇಷ್ಟೇ ಅಲ್ಲದೆ ಕೊರೊನಾ ಭೀತಿ ನಗರದ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಭಾನುವಾರವೂ ಯಾದಗಿರಿಯಲ್ಲಿ ಹೋಟೆಲ್‍ಗಳು ಖಾಲಿ ಖಾಲಿಯಾಗಿವೆ. ಗ್ರಾಹಕರಿಲ್ಲದೆ ನಗರದ ಹೊಟೇಲ್ ಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ಯಾನಿಟೈಸರ್, ಸಮಾಜಿಕ ಅಂತರ ಕಾಪಾಡಿ ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಜನ ಮಾತ್ರ ಹೋಟೆಲ್ ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.