– ಮಂಡ್ಯದಲ್ಲಿ ವಿಚಿತ್ರ ಪ್ರಕರಣ
– ಪೇದೆಯಿಂದ ನನ್ನ ಪತ್ನಿಯನ್ನ ದೂರ ಮಾಡಿ
ಮಂಡ್ಯ/ಚಾಮರಾಜನಗರ: ಬೇರೊಬ್ಬರ ಪತ್ನಿಯ ಜೊತೆ ಪೊಲೀಸ್ ಕಾನ್‍ಸ್ಟೇಬಲ್ ಪರಾರಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ನಿಮ್ಮದೇ ಇಲಾಖೆಯ ಕಾನ್‍ಸ್ಟೇಬಲ್ ನನ್ನ ಪತ್ನಿಯನ್ನು ಅಪಹರಿಸಿದ್ದಾನೆ. ಆತನಿಂದಾಗಿ ನನ್ನ ಸಂಸಾರ ಬೀದಿಗೆ ಬಂದಿದೆ. ದಯಮಾಡಿ ನನಗೆ ನ್ಯಾಯ ಕೊಡಿಸಿ ಎಂದು ಚಾಮರಾಜನಗರ ಜಿಲ್ಲೆಯ ವ್ಯಕ್ತಿಯೊಬ್ಬ ಮಂಡ್ಯ ಎಸ್‍ಪಿಗೆ ದೂರು ನೀಡಿರುವ ವಿಚಿತ್ರ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಕೊಳ್ಳೇಗಾಲ ತಾಲೂಕಿನ ಮುಳ್ಳೂರು ನಿವಾಸಿ ನಾಗರಾಜಪ್ಪ ಕೊಳ್ಳೇಗಾಲ ಪಟ್ಟಣದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮಕ್ಕಳೊಂದಿಗೆ ವಾಸವಾಗಿದ್ದ. ಆದರೆ ಈತನ ಹೆಂಡತಿ ಜೊತೆ ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಸಂಬಂಧ ಇಟ್ಟುಕೊಂಡಿದ್ದನು. ಹರೀಶ್ ಕೊಳ್ಳೇಗಾಲ ಮೂಲದವನಾಗಿದ್ದು, ಈ ಹಿಂದೆ ಕೊಳ್ಳೇಗಾಲದಲ್ಲಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಇಬರಿಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು.
ಕಾನ್‍ಸ್ಟೇಬಲ್ ಮತ್ತು ನಾಗರಾಜಪ್ಪನ ಪತ್ನಿ ಈ ಹಿಂದೆ ಎರಡು ಬಾರಿ ಓಡಿ ಹೋಗಿದ್ದರು. ಆದರೂ ಅವರಿಬ್ಬರನ್ನು ಕರೆಸಿ ರಾಜಿ ಪಂಚಾಯಿತಿ ಮಾಡಿ ಮತ್ತೆ ಆಕೆಯನ್ನು ಪತಿಯೊಂದಿಗೆ ಕಳುಹಿಸಿದ್ದರು. ಇದೀಗ ಮೂರನೇ ಬಾರಿ ನಾಗರಾಜಪ್ಪನ ಪತ್ನಿಯನ್ನು ಕರೆದುಕೊಂಡು ಕಾನ್‍ಸ್ಟೇಬಲ್ ಪರಾರಿಯಾಗಿದ್ದಾನೆ. ಪತಿ ಎಲ್ಲ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಹೀಗಾಗಿ ನಾಜರಾಜಪ್ಪ ಮಂಡ್ಯ ಎಸ್‍ಪಿಗೆ ದೂರು ನೀಡಿದ್ದಾರೆ.
ಕಾನ್‍ಸ್ಟೇಬಲ್ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ನಾಗರಾಜಪ್ಪ ಮಂಡ್ಯ ಎಸ್‍ಪಿಗೆ ದೂರು ನೀಡಿದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿ ಇದ್ದೇನೆ, ನನ್ನ ಜೊತೆ ಬಾ ಚೆನ್ನಾಗಿ ನೋಡಿಕೊಳ್ಳುವೆ ಎಂದು ನನ್ನ ಪತ್ನಿಯನ್ನು ಪುಸಲಾಯಿಸಿದ್ದಾನೆ. ಅಲ್ಲದೇ ನೀನು ನನ್ನ ಜೊತೆಗಿರುವ ವಿಡಿಯೋ ಮತ್ತು ಮಾತನಾಡಿರುವ ಸಂಭಾಷಣೆ ಇದೆ ಎಂದು ಬೆದರಿಸಿ ನನ್ನ ಪತ್ನಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದಾನೆ ಎಂದು ನಾಗರಾಜಪ್ಪ ಆರೋಪಿಸಿದ್ದಾರೆ.
ಅಲ್ಲದೇ ನನ್ನ ಪತ್ನಿಯನ್ನು ಮಕ್ಕಳಿಂದ ದೂರ ಮಾಡಿ ತನ್ನ ಜೊತೆ ಕರೆದುಕೊಂಡು ಹೋಗಿದ್ದಾನೆ. ಇದರಿಂದಾಗಿ ನನ್ನ ಕುಟುಂಬ ಇದೀಗ ಬೀದಿಗೆ ಬಿದ್ದಿದೆ. ಹಾಗಾಗಿ ನನ್ನ ಹೆಂಡತಿಯನ್ನು ಹುಡುಕಿಕೊಟ್ಟು, ಆ ಪೇದೆಯಿಂದ ನನ್ನ ಪತ್ನಿಯನ್ನು ದೂರ ಮಾಡಿ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ನಾಗರಾಜಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.