ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ-ಹೆಸಗೋಡು ಗ್ರಾಮಗಳ ಅಂಚಿನಲ್ಲಿ ಒಂಟಿ ಸಲಗ ಘೀಳಿಡುತ್ತಾ ನಡೆಯುತ್ತಿರುವುದನ್ನು ಕಂಡು ಹಳ್ಳಿಗರು ಆತಂಕದಲ್ಲಿ ಬದುಕುತ್ತಿದ್ದಾರೆ.
ಗುತ್ತಿ, ಬೈರಾಪುರ, ಗೌಡಹಳ್ಳಿ, ಸಾರಗೋಡು, ಹೆಸಗೋಡು ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಕಾಟ ಹೆಚ್ಚಾಗಿದೆ. ಎರಡ್ಮೂರು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ನೂರಾರು ಜನ ಮನೆ-ತೋಟ-ಗದ್ದೆಗಳನ್ನ ಕಳೆದುಕೊಂಡಿದ್ದಾರೆ. ತೋಟ, ಗದ್ದೆಗಳಲ್ಲಿ ದಾಂಧಲೆ ಮಾಡುತ್ತಿದ್ದ ಒಂಟಿ ಸಲಗ ಇದೀಗ ಗ್ರಾಮದ ಅಂಚಿಗೂ ಕಾಲಿಟ್ಟಿರೋದು ಹಳ್ಳಿಗರಲ್ಲಿ ಆತಂಕವನ್ನುಂಟು ಮಾಡಿದೆ.
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಇಂದಿಗೂ ನಿಂತಿಲ್ಲ. ಮೂರ್ನಾಲ್ಕು ಕಾಡಾನೆಗಳ ಹಿಂಡು ತಾಲೂಕಿನ ಗ್ರಾಮೀಣ ಭಾಗದಲ್ಲಿ ದಾಳಿ ಮಾಡಿ ಕಾಫಿ, ಅಡಿಕೆ, ಮೆಣಸು, ಬಾಳೆ ಸೇರಿದಂತೆ ಅನೇಕ ಬೆಳೆಗಳನ್ನ ಹಾಳು ಮಾಡುತ್ತಿವೆ. ಜೀವ ಉಳಿಸಿಕೊಳ್ಳುತ್ತಿದ್ದ ಜನರಿಗೆ ಇದೀಗ ಆನೆಗಳು ಗ್ರಾಮದಂಚಿಗೆ ಬರುತ್ತಿರೋದು ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನ ಓಡಿಸಲು ಅಥವ ಹಿಡಿದು ಸ್ಥಳಾಂತರಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಸ್ಥಳಿಯರ ಆರೋಪಕ್ಕೂ ದಶಕಗಳ ಇತಿಹಾಸವಿದೆ. ಸ್ಥಳಿಯರು ಆನೆಗಳು ಬಂದಿವೆ ಎಂದು ಫೋನ್ ಮಾಡಿದ ಬಹಳ ಹೊತ್ತಿನ ನಂತರ ಬರುವ ಅಧಿಕಾರಿಗಳು ಎರಡು ಪಟಾಕಿ ಸಿಡಿಸಿ ನಮ್ಮ ಕೈಗೆ ಪಟಾಕಿ ಕೊಟ್ಟು ಹೋಗುತ್ತಾರೆ.
ಆನೆಗಳನ್ನ ಹಿಡಿದು ಸ್ಥಳಾಂತರಿಸುವುದಿಲ್ಲ. ಒಂದು ವಾರ-ಹದಿನೈದು ದಿನ ಬಳಿಕ ಮತ್ತೆ ಬರುತ್ತವೆ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಒಂಟಿ ಸಲಗ ಗ್ರಾಮದ ಅಂಚಿಗೆ ಬಂದಿರುವುದರಿಂದ ಹಳ್ಳಿಗರ ಆತಂಕ ಹೆಚ್ಚಾಗಿದ್ದು ಹೊಲ-ಗದ್ದೆ ತೋಟಗಳಿಗೆ ಕೆಲಸಕ್ಕೆ ಹೋಗಲು ಭಯಪಡುವ ಸ್ಥಿತಿ ನಿಮಾರ್ಣವಾಗಿದೆ. ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಆನೆ ಓಡಿಸುವ ಬದಲು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.