ಮೂಕ ಗೋವುಗಳಿಗೂ ತಟ್ಟಿದ ಕೊರೊನಾ ಎಫೆಕ್ಟ್

Public TV
2 Min Read
Madikeri Cattl 3

ಮಡಿಕೇರಿ: ಕೊರೊನಾ ವೈರಸ್ ವಿಶ್ವದೆಲ್ಲೆಡೆ ಹಬ್ಬಿ, ದೇಶವೇ ಲಾಕ್‍ಡೌನ್ ಆಗಿತ್ತು. ಅದರ ಎಫೆಕ್ಟ್ ಕೇವಲ ಮಾನವನಿಗೆ ಅಷ್ಟೇ ಅಲ್ಲ, ಮೂಕ ಗೋವುಗಳಿಗೆ ತಟ್ಟಿದೆ. ಎರಡು ವರ್ಷ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ದುರಂತದಲ್ಲಿ ನರಳಿದ್ದ ಮುಗ್ಧ ಹಸುಗಳು ಈ ಬಾರಿಯೂ ಮಳೆಯಲ್ಲೇ ನೆನೆಯಬೇಕಾದ ಸ್ಥಿತಿ ಎದುರಾಗಿದೆ.

ಹೌದು ಕೊಡಗು ಎರಡು ವರ್ಷವೂ ಪ್ರಾಕೃತಿಕ ದುರಂತಕ್ಕೆ ಇನ್ನಿಲ್ಲದಷ್ಟು ನಲಿಗಿ ಹೋಗಿತ್ತು. ಎಷ್ಟೋ ಮನೆಗಳು, ತೋಟ ಗದ್ದೆಗಳು ಕೊಚ್ಚಿ ಹೋದವು. ಹೀಗಾಗಿ ಕೊಡಗಿನ ಹಲವು ರೈತರು ತಮ್ಮ ದನಗಳನ್ನು ಕೂಡಿಹಾಕಲು ಜಾಗವಿಲ್ಲದೆ ಬೀದಿಗೆ ಬಿಟ್ಟರು. ಈ ವೇಳೆ ಹರೀಶ್ ಆಚಾರ್ಯ ಎಂಬುವರು ಗೋವುಗಳ ರೋಧನೆ ನೋಡಲು ಸಾಧ್ಯವಾಗದೆ, ತಾವೇ ಗೋವುಗಳನ್ನು ಸಾಕಲು ಮುಂದಾದರು. ಅದಕ್ಕಾಗಿ ಆರು ತಿಂಗಳ ಹಿಂದೆಯೇ ಮಡಿಕೇರಿ ತಾಲೂಕಿನ ಬಾಗಮಂಡಲ ಸಮೀಪದ ಚೆಟ್ಟಿಮಾನಿಯಲ್ಲಿ 6 ಎಕರೆ ಪ್ರದೇಶದಲ್ಲಿ ಗೋಶಾಲೆಯನ್ನು ಆರಂಭಿಸಿದರು.

Madikeri Cattl 4

ಶಾಲೆ ಆರಂಭವಾಗುತ್ತಿದ್ದಂತೆ 55 ದನ, ಕರು ಮತ್ತು ಎಮ್ಮೆಗಳನ್ನು ಜನರು ತಂದು ಬಿಟ್ಟರು. ಗೋ ಶಾಲೆ ಆರಂಭವಾದಾಗ ಸಾಕಷ್ಟು ದಾನಿಗಳು ದನಗಳಿಗಾಗಿ ಕಟ್ಟಡ ನಿರ್ಮಿಸಲು ಮತ್ತು ಅವುಗಳಿಗೆ ಮೇವು ಜೊತೆಗೆ ಔಷಧಿ ಕೊಳ್ಳಲು ಧನ ಸಹಾಯ ಮಾಡುವ ಭರವಸೆ ನೀಡಿದ್ದರು. ಆ ಧೈರ್ಯದಿಂದಲೇ ಹರೀಶ್ ಆಚಾರ್ಯ ಅವರು ಗೋವುಗಳನ್ನು ಲಾಲಾನೆ, ಪೋಷಣೆ ಮಾಡಲು ಆರಂಭಿಸಿದರು. ಅದಕ್ಕಾಗಿ 6 ಜನರನ್ನು ಕೆಲಸಕ್ಕಾಗಿ ನೇಮಿಸಿಕೊಂಡರು. ಹೇಗೋ ನಡೆಯುತ್ತಿದೆಯಲ್ಲಾ ಎಂದುಕೊಳ್ಳುತ್ತಿದ್ದಂತೆ ದೇಶಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್‍ಡೌನ್ ಆಯಿತು. ಅಂದಿನಿಂದ ಗೋಶಾಲೆ ನಿರ್ಮಿಸಲು ಸಹಾಯ ಮಾಡುವುದಾಗಿ ಹೇಳಿದ್ದ ದಾನಿಗಳು ಹಿಂದೆ ಸರಿದಿದ್ದಾರೆ.

Madikeri Cattl

ಸದ್ಯ 55 ಗೋವುಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದು, ಮಳೆ ಗಾಳಿಯಲ್ಲಿ ನೆನೆಯಬೇಕಾಗಿದೆ. ಕೊಡಗಿನಲ್ಲಿ ನಿರಂತರವಾಗಿ ಮೂರು ತಿಂಗಳು ಮಳೆ ಸುರಿಯುವುದರಿಂದ ಇನ್ನೇನು ಮಳೆ ಆರಂಭವಾಗಲಿದ್ದು, ಮೂಕ ಪ್ರಾಣಿಗಳು ಮಳೆಯಲ್ಲೇ ನೆನೆಯಬೇಕಾಗಿದೆ. 55 ಜಾನುವಾರುಗಳಿಗೆ ಕೇವಲ ಇದೊಂದು ತಿಂಗಳು ಮಾತ್ರವೇ ಸಾಕಾಗುವಷ್ಟು ಮಾತ್ರವೇ ಹುಲ್ಲು ಇದ್ದು, ಇದೊಂದು ತಿಂಗಳು ಕಳೆದಲ್ಲಿ ಅವುಗಳಿಗೆ ಮೇವು ಕೂಡ ಇಲ್ಲದಂತೆ ಆಗಲಿದೆ. ಜೊತೆಗೆ ಅವುಗಳಿಗೆ ಯಾವುದಾದರು ರೋಗ ಬಂದಲ್ಲಿ ಚಿಕಿತ್ಸೆಗೂ ಹಣವಿಲ್ಲದಂತೆ ಆಗಿದೆ.

Madikeri Cattl 2

ಹೀಗಾಗಿ ದಾನಿಗಳು ಮನಸ್ಸು ಮಾಡಿ ಸಹಾಯ ಮಾಡಿದಲ್ಲಿ ಮೂಕ ಗೋವುಗಳ ರೋಧನೆಯನ್ನು ತಪ್ಪಿಸಬಹುದು. ಆದ್ದರಿಂದ ದಾನಿಗಳು ದೊಡ್ಡ ಮನಸ್ಸು ಮಾಡಿದರೆ ಗೋಶಾಲೆ ನಿರ್ಮಿಸಬಹುದು ಎನ್ನೋದು ಅಲ್ಲಿಯ ನಿರ್ವಾಹಕರ ಮಾತು. ಒಟ್ಟಿನಲ್ಲಿ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪಕದಲ್ಲಿ ನಲುಗಿದ್ದ ಗೋವುಗಳು ಗೋಶಾಲೆಯಲ್ಲಿ ಹೇಗೋ ನೆಮ್ಮದಿ ನೆಲೆ ಕಾಣದೆ ಎಂದುಕೊಂಡಿದ್ದವು. ಆದರೆ ಗೋಶಾಲೆ ನಿರ್ಮಿಸಲು ಸಹಾಯ ಮಾಡುತ್ತೇವೆ ಎಂದಿದ್ದ ದಾನಿಗಳು ಇದೀಗ ಕೊರೊನಾದಿಂದ ಹಿಂದೆ ಸರಿದಿರುವುದರಿಂದ ಜಾನುವಾರುಗಳು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *