– ಸಾರಿಗೆ ಇಲಾಖೆಯಿಂದ ಕೋರಿಯರ್ ಸೇವೆ ಆರಂಭ
– ಪಟ್ಟಣ ಪ್ರದೇಶದಲ್ಲಿ ಬಸ್‍ನಲ್ಲಿ ಸೈಕಲ್ ಇಡಲು ವ್ಯವಸ್ಥೆ
ರಾಯಚೂರು: ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದವರು ಮುಗ್ಧ ಹಾಗೂ ಅಮಾಯಕರು ಎಂಬ ಶಾಸಕ ಜಮೀರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಒಳ್ಳೆಯವರು ಮಧ್ಯರಾತ್ರಿ ಬಂದು ದೊಂಬಿ ಮಾಡುವುದಿಲ್ಲ. ನವೀನ್ ಎಂಬಾತ ಡಿಕೆಶಿ ನಮ್ಮ ಬಾಸ್, ರಾಹುಲ್, ಪ್ರಿಯಾಂಕ ನಮ್ಮ ನಾಯಕರು ಎಂದು ಪೋಸ್ಟ್ ಹಾಕುತ್ತಿದ್ದ. ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿಯವನು ಎಂದು ಬಿಂಬಿಸುತ್ತಿದೆ. ಚುನಾವಣೆ ವೇಳೆ ನವೀನ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾನೆ. ಈ ಎಲ್ಲಾ ಮಾಹಿತಿ ನಮ್ಮ ಗೃಹ ಇಲಾಖೆ ಬಳಿ ಇವೆ. ಸಮಾಜಕ್ಕೆ ತಪ್ಪು ಸಂದೇಶ ಕಾಂಗ್ರೆಸ್ ಪಕ್ಷ ನೀಡುತ್ತಿದೆ ಅಂತ ತಿಳಿಸಿದ್ದಾರೆ.
Advertisement
Advertisement
ಗುರುವಾರ ಸಚಿವ ಸಂಪುಟ ಸಭೆ ಬಳಿಕ ಗಣೇಶ ಉತ್ಸವದ ಬಗ್ಗೆ ಚಿಂತನೆ ಮಾಡಲಾಗುವುದು. ನಾನು ಮೊನ್ನೆ ದೆಹಲಿಗೆ ಹೋಗಿದ್ದು, ನನ್ನ ಇಲಾಖೆ ಕಾರ್ಯಗಳಿಗೆ. ಒಂದು ವರ್ಷದ ಬಿಜೆಪಿ ಅಧಿಕಾರ ಪೂರೈಸಿದ ಹಿನ್ನೆಲೆ ನಾನು ದೆಹಲಿಗೆ ಹೋಗಿದ್ದೆ. ಆಸೆ ಸನ್ಯಾಸಿಗಳನ್ನೂ ಬಿಟ್ಟಿಲ್ಲ. ನಾನು ರಾಜಕೀಯ ಸನ್ಯಾಸಿಯಲ್ಲ. ಆದರೆ ಸದ್ಯಕ್ಕೆ ನಾನು ಸಿಎಂ ಆಗುವ ಯಾವ ಪ್ರಸ್ತಾವವೂ ಇಲ್ಲ. ಯಡಿಯೂರಪ್ಪನವರು ಮುಂದಿನ ಮೂರು ವರ್ಷಕಾಲ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಸವದಿ ಹೇಳಿದ್ದಾರೆ.
Advertisement
Advertisement
ಸದ್ಯ ಸಾರಿಗೆ ಇಲಾಖೆ ಭಾರೀ ನಷ್ಟದಲ್ಲಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಸಾರಿಗೆ ಬಸ್ ಓಡಾಡಿಸುತ್ತಿದ್ದೇವೆ. ಸಾರಿಗೆ ಇಲಾಖೆಯ ಒಟ್ಟು ಸಿಬ್ಬಂದಿ 1 ಲಕ್ಷ 30 ಸಾವಿರ ಜನರಿಗೆ ತಿಂಗಳಿಗೆ 326 ಕೋಟಿ ಸಂಬಳವಾಗುತ್ತದೆ. ಸರ್ಕಾರದ ಖಜಾನೆಯಿಂದ ಸಂಬಳ ಕೊಡಲು ಸಿಎಂಗೆ ಮನವಿ ಮಾಡಿದ್ದೇವೆ. ಹಣಕಾಸಿನ ತೊಂದರೆಯಿರುವುದರಿಂದ ಎರಡು ತಿಂಗಳ ಸಂಬಳವನ್ನು 75:25 ಅನುಪಾತದಲ್ಲಿ ಕೊಡಲು ಮನವಿ ಮಾಡಲಾಗಿದೆ. 25 ಪ್ರತಿಶತ ಸಂಬಳ ಮಾತ್ರ ನಿಗಮ ಕೊಡಲು ಸಾಧ್ಯವಾಗುತ್ತದೆ. ಸಿಬ್ಬಂದಿ ಸಂಬಳವನ್ನು ಕಷ್ಟಕಾಲದಲ್ಲೂ ಕೊಡುತ್ತೇವೆ ಎಂದರು.
ಸಾರಿಗೆ ಇಲಾಖೆ ನಷ್ಟ ಕಡಿಮೆ ಮಾಡಲು ನಾವು ಹೊಸ ವ್ಯವಸ್ಥೆ ಪ್ರಾರಂಭಿಸಿದ್ದೇವೆ. ಪಟ್ಟಣ, ಪ್ರವಾಸಿ ಪ್ರದೇಶಗಳಲ್ಲಿ ಬಸ್ ನಲ್ಲಿ ಸೈಕಲ್ ವ್ಯವಸ್ಥೆ ಮಾಡುತ್ತಿದ್ದೇವೆ. ಸದ್ಯ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದು, ಬಳಿಕ ಎಲ್ಲೆಡೆ ವಿಸ್ತರಣೆ ಮಾಡುವ ಯೋಚನೆಯಿದೆ. ಇಲಾಖೆಯಿಂದ ಕೋರಿಯರ್ ಸೇವೆ ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಖಾಸಗಿಯವರಿಗಿಂತಲೂ ಪರಿಣಾಮಕಾರಿಯಾಗಿ ಕೋರಿಯರ್ ಸರ್ವಿಸ್ ಕೊಡುತ್ತೇವೆ. ಇದರ ಬಗ್ಗೆ ಎಲ್ಲ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.