– ಎರಡು ವರ್ಷವಾದ್ರೂ ಪೂರ್ಣಗೊಳ್ಳದ ಕಾಮಗಾರಿ
– ಸರ್ಕಾರದ ಮಂದಗತಿ ಕಾರ್ಯಕ್ಕೆ ಸ್ಥಳೀಯರ ಕಿಡಿ
ಚಿಕ್ಕಮಗಳೂರು: 2019ರ ಆಗಸ್ಟನಲ್ಲಿ ಸುರಿದ ಮಳೆಯಿಂದಾಗಿ ಚಾರ್ಮಾಡಿ ರಸ್ತೆಯಲ್ಲಾದ ಅನಾಹುತ ಇನ್ನೂ ದುರಸ್ತಿಯಾಗಿಲ್ಲ, ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ರಸ್ತೆ ಕಾಮಗಾರಿಯನ್ನ ಪೂರ್ಣಗೊಳಿಸಿ ಚಾರ್ಮಾಡಿ ಘಾಟ್ ರಸ್ತೆಯನ್ನ ಸಂಚಾರ ಮುಕ್ತಗೊಳಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
2019 ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಭಾಗ 45 ವರ್ಷಗಳಿಂದ ಕಾಣದಂತಹ ಮಳೆಯನ್ನ ಕಂಡು ಕಂಗಾಲಾಗಿದ್ದರು. ಸೇತುವೆಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದಕ್ಕೆ ಲೆಕ್ಕವೇ ಇರಲಿಲ್ಲ. ರಸ್ತೆಗಳು ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಅದರಲ್ಲೂ ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ತೀವ್ರ ಕುಸಿತಕ್ಕೆ ಒಳಗಾಗಿತ್ತು. ಕೊಟ್ಟಿಗೆಹಾರದಿಂದ 22 ಕಿ.ಮೀ. ಅಂತರದ ಚಾರ್ಮಾಡಿ ಘಾಟ್ ಸುಮಾರು 20ಕ್ಕೂ ಹೆಚ್ಚು ಕಡೆ ಕುಸಿತ ಕಂಡಿತ್ತು. ಅಂದು ಸರ್ಕಾರ ಮೂರು ತಿಂಗಳಲ್ಲಿ ದುರಸ್ತಿ ಮಾಡುತ್ತೇವೆ ಎಂದಿತ್ತು. ಎರಡು ವರ್ಷವಾದರೂ ಚಾರ್ಮಾಡಿ ಘಾಟ್ ಸಂಚಾರ ಮುಕ್ತವಾಗಿಲ್ಲ.
ಜಿಲ್ಲೆ ಸೇರಿದಂತೆ ರಾಜ್ಯದ ಜನ ಚಾರ್ಮಾಡಿ ಘಾಟ್ ಮೇಲೆ ಅವಲಂಬಿತರಾಗಿದ್ದಾರೆ. ಆರೋಗ್ಯ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಮಂಗಳೂರು-ಉಡುಪಿ ಹೋಗಲು ಚಾರ್ಮಾಡಿ ಅತ್ಯಂತ ಸಹಾಯಕಾರಿ. ಆದರೆ ಈ ಬಹುಪಯೋಗಿ ರಸ್ತೆ ದುರಸ್ತಿಯಾಗುತ್ತಿದ್ದ ಕಾರಣ ಸಂಚಾರಕ್ಕೆ ಅವಕಾಶವಿರಲಿಲ್ಲ. ಈ ಮಾರ್ಗ ತಿಂಗಳುಗಟ್ಟಲೇ ಬಂದ್ ಆಗಿತ್ತು. ಮೂರೇ ತಿಂಗಳಲ್ಲಿ ಸಂಚಾರಮುಕ್ತ ಮಾಡುತ್ತೇವೆ ಎಂದಿದ್ದ ಸರ್ಕಾರ ಎರಡು ವರ್ಷವಾದರೂ ಕಾಮಗಾರಿ ಮುಗಿಸಿಲ್ಲ. ಇದು ಮಲೆನಾಡಿಗರು ಸೇರಿದಂತೆ ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ. ಈಗ ಮತ್ತೆ ಮಳೆಗಾಲದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮತ್ತೆ ಮಳೆಯಾದ್ರೆ ಇಡೀ ಚಾರ್ಮಾಡಿಯೇ ಇಲ್ಲದಂತಾಗುತ್ತೇನೋ ಅನ್ನೋ ಆತಂಕ ಸ್ಥಳೀಯರು ಹಾಗೂ ರಾಜ್ಯದ ಜನರನ್ನ ಕಾಡುತ್ತಿದೆ. ಸರ್ಕಾರದ ಮಂದಗತಿಯ ಕೆಲಸದ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಚಾರ್ಮಾಡಿ ಘಾಟ್‍ನಲ್ಲಿ ಕೆಲಸವೂ ಮಂದಗತಿಯಲ್ಲಿ ನಡೆಯುತ್ತಿದೆ. ಮತ್ತೊಂದೆಡೆ ಭಾರೀ ವಾಹಗಳಿಗೆ ಬ್ರೇಕ್ ಬಿದ್ದಿದೆ. ಈ ಎರಡೂ ಬೆಳೆವಣಿಗೆ ಕೂಡ ಮಲೆನಾಡಿಗರಿಗೆ ಮತ್ತಷ್ಟು ಸಮಸ್ಯೆ ತಂದಿದೆ. ಅದರಲ್ಲೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಗೆ ಚಾರ್ಮಾಡಿಯಲ್ಲಿ ಸಂಚಾರಕ್ಕೆ ನಿಷೇಧವಿರೋದು ಕೂಡ ಜನಸಾಮಾನ್ಯರ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸದ್ಯಕ್ಕೆ ಮಿನಿ ಬಸ್‍ಗಳ ಸಂಚಾರವಿದ್ದರೂ ಅದು ಸೂಕ್ತ ಸಮಯಕ್ಕೆ ಜನಸಾಮಾನ್ಯರ ಕಷ್ಟಕ್ಕೆ ಆಗುತ್ತಿಲ್ಲ. ಗಂಟೆಗೊಂದು ಬಸ್ ಇರೋದು ಬಂದಾಗಲೇ ಬಂತೆಂದು. ಹೋದಾಗಲೇ ಹೊರಡ್ತು ಎಂದು ಜನರಿಗೆ ಮಿನಿ ಬಸ್‍ಗಳ ಮೇಲೂ ಅಸಮಾಧಾನವಿದೆ.
ಮಿನಿ ಬಸ್ ಕೂಡ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಇರೋದು. ಪ್ರತಿ 10 ನಿಮಿಷಕ್ಕೆ ಒಂದು ಬಸ್ಸಿದ್ದ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಗಂಟೆಗೊಂದು ಬಸ್ ಇರುವುದರಿಂದ ಜನ ತೀವ್ರ ಸಂಕಷ್ಟಕ್ಕೀಡಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಸಮರ್ಪಕವಾದ ಆರೋಗ್ಯ ಸೇವೆ ಸೌಲಭ್ಯವಿಲ್ಲದ ಕಾರಣ ಜಿಲ್ಲೆಯ ಜನ ಮಂಗಳೂರು-ಉಡುಪಿ ಮೇಲೆ ಅವಲಂಬಿತರಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಯಾರಾದರೂ ಮಂಗಳೂರು-ಉಡುಪಿ ಹೋಗಬೇಕಂದರೆ ಖಾಸಗಿ ವಾಹನಗಳಿಗೆ ಸಾವಿರಾರು ರೂಪಾಯಿ ಹಣ ನೀಡಬೇಕೆಂಬುದು ಸ್ಥಳೀಯರು ಅಳಲು. ಆದ್ದರಿಂದ, ಸರ್ಕಾರ ಕೂಡಲೇ ಕೆಲಸ ಮುಗಿಸಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಂಡಬೇಕೆಂದು ಆಗ್ರಹಿಸಿದ್ದಾರೆ.
ಜನರಿಗೆ ಅನಿವಾರ್ಯ ಹಾಗೂ ಅಗತ್ಯವಾಗಿರುವ ರಸ್ತೆ ಕುಸಿದು ಎರಡು ವರ್ಷವಾದರೂ ಸರ್ಕಾರ ಇನ್ನೂ ಕಾಮಗಾರಿಯನ್ನ ಪೂರ್ಣಗೊಳಿಸದಿರೋದು ಸ್ಥಳೀಯರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೇನು ನಾಳೆ-ನಾಡಿದ್ದು ಎನ್ನುವಷ್ಟರಲ್ಲಿ ಮಲೆನಾಡಲ್ಲಿ ಮಳೆಗಾಲ ಆರಂಭವಾಗಲಿದೆ. ಹೆದ್ದಾರಿ ಪ್ರಾಧಿಕಾರದವರು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಯಾರೂ ಮುಂದೆ ಬರುತ್ತಿಲ್ಲ ಅಂತ ಕಾರಣ ಹೇಳಿಕೊಂಡು ದಿನದೂಡುತ್ತಿದ್ದಾರೆ ಎಂದು ಸ್ಥಳಿಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.