ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರು ಯಾವುದೇ ಕಾರ್ಯಕ್ರಮ, ಕೆಲಸದಲ್ಲಿ ಭಾಗವಹಸಿದರೂ ಮೊದಲು ತಾವೇ ಮಾಡುತ್ತಾರೆ. ಇದರಿಂದ ಹಲವು ಬಾರಿ ಎಡವಟ್ಟುಗಳು ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಇಷ್ಟಾದರೂ ರೇಣುಕಾಚಾರ್ಯ ಅವರು ಮಾತ್ರ ಇದಾವುದನ್ನೂ ಬಿಟ್ಟಿಲ್ಲ. ಇದೀಗ ಮುಕ್ತಿ ವಾಹನವನ್ನೂ ಚಾಲನೆ ಮಾಡಿದ್ದಾರೆ.
ಹೊನ್ನಾಳಿ ಪಟ್ಟಣ ಪಂಚಾಯತಿ ವತಿಯಿಂದ ಮುಕ್ತಿ ವಾಹನವನ್ನು ನೀಡಲಾಗಿದ್ದು, ವಾಹನಕ್ಕೆ ಪೂಜೆ ಸಲ್ಲಿಸಿ ಶಾಸಕ ರೇಣುಕಾಚಾರ್ಯ ಚಾಲನೆ ನೀಡಿದರು. ಈ ವೇಳೆ ಪೂಜೆ ಆಗುತ್ತಿದ್ದಂತೆ ಸ್ವತಃ ತಾವೇ ಮುಕ್ತಿ ವಾಹನವನ್ನೇರಿ ಚಾಲನೆ ಮಾಡಿದರು. ಈ ಮೂಲಕ ನೆರೆದಿದ್ದವರು ಹುಬ್ಬೇರಿಸುವಂತೆ ಮಾಡಿದರು. ಶಾಸಕರು ಮುಕ್ತಿ ವಾಹನ ಏರುತ್ತಿದ್ದಂತೆ ಅಧಿಕಾರಿಗಳು ಒಂದು ಕ್ಷಣ ನಿಬ್ಬೆರಗಾದರು. ನಂತರ ರೇಣುಕಾಚಾರ್ಯ ಅವರು ಮುಕ್ತಿ ವಾಹನದಲ್ಲೇ ಒಂದು ರೌಂಡ್ ಹಾಕಿದರು.
ಈ ಹಿಂದೆ ಕೆಎಸ್‍ಆರ್ ಟಿಸಿ ಬಸ್ ಚಲಾಯಿಸುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೆ ಟ್ರ್ಯಾಕ್ಟರ್ ಸಹ ಓಡಿಸಿದ್ದರು. ಹೀಗೆ ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುವ ಮೂಲಕ ರೇಣುಕಾಚಾರ್ಯ ಅವರು ಸುದ್ದಿ ಆಗುತ್ತಿರುತ್ತಾರೆ. ಈ ಹಿಂದೆ ಪ್ರವಾಹದ ಸಂದರ್ಭದಲ್ಲಿ ನೀರಿನ ದಂಡೆಗೆ ಬಂದ ತೆಪ್ಪವನ್ನು ಓಡಿಸಿ ಪೋಸ್ ನೀಡುವ ಮೂಲಕ ಭಾರೀ ಸುದ್ದಿಯಾಗಿದ್ದರು. ಅಲ್ಲದೆ ಗೂಳಿ ಸ್ಪರ್ಧೆ ವೇಳೆ ಅದನ್ನು ಹಿಡಿಯಲು ಹೋಗಿ ಬಿದ್ದು ನಗೆಪಾಟಲಿಗೆ ಈಡಾಗಿದ್ದರು.