ಶಿವಮೊಗ್ಗ: ಕೊರೊನಾ ಕಾಣಿಸಿಕೊಂಡ ಆರಂಭದ ದಿನದಿಂದಲೂ ಹಸಿರು ವಲಯದಲ್ಲಿದ್ದ ಮಲೆನಾಡಿನ ಜಿಲ್ಲೆ ಶಿವಮೊಗ್ಗಕ್ಕೆ ಅಹಮದಾಬಾದ್ ನಿಂದ ಬಂದ ತಬ್ಲಿಘಿಗಳಿಂದಾಗಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆತಂಕ ಎದುರಾಗಿತ್ತು. ಇದೀಗ ಮುಂಬೈನಿಂದ ಬಂದ 6 ಮಂದಿ ಯುವಕರು ಮತ್ತೊಮ್ಮೆ ಮಲೆನಾಡಿಗರಿಗೆ ಆತಂಕ ತಂದೊಡ್ಡುವಂತೆ ಮಾಡಿದ್ದಾರೆ.
Advertisement
ಜಿಲ್ಲೆಯ ಸೊರಬ, ಸಾಗರ ಹಾಗೂ ಹೊಸನಗರ ತಾಲೂಕಿನ 6 ಮಂದಿ ಯುವಕರು ಮುಂಬೈನ ಥಾಣೆಯಲ್ಲಿ ಚಿನ್ನ,ಬೆಳ್ಳಿ ಕೆಲಸ ಮಾಡಿಕೊಂಡಿದ್ದರು. ಕೊರೊನಾ ಪರಿಣಾಮ ಲಾಕ್ ಡೌನ್ ಆದ ಕಾರಣ ಕೆಲಸ ಇಲ್ಲದೆ, ಅತ್ತ ಸ್ವಗ್ರಾಮಕ್ಕೆ ಬರಲು ಆಗದ ಸ್ಥಿತಿಯಲ್ಲಿದ್ದರು. ತಮ್ಮ ತಮ್ಮ ಗ್ರಾಮದತ್ತ ಬರಲು ಈ ಯುವಕರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಪಾಸ್ ಪಡೆಯಲು ಸರ್ಕಾರಿ ಕಚೇರಿ ಅಲೆದಾಡಿದ್ದರು. ಆದರೆ ಸ್ವಗ್ರಾಮಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಸರ್ಕಾರ ಕೆಲವು ದಿನದ ಹಿಂದೆ ಲಾಕ್ ಡೌನ್ ನಲ್ಲಿ ಸ್ವಲ್ಪ ಸಡಿಲಿಕೆ ಮಾಡಿದ ಪರಿಣಾಮ ಈ ಯುವಕರು ಹೊಸ ಸೈಕಲ್ ಗಳನ್ನು ಖರೀದಿ ಮಾಡಿದ್ದಾರೆ. ಈ ಹೊಸ ಸೈಕಲ್ ನಲ್ಲಿಯೇ ಮುಂಬೈಯಿಂದ ಶಿವಮೊಗ್ಗಕ್ಕೆ ಹೊರಟಿದ್ದಾರೆ.
Advertisement
Advertisement
ಕೊರೊನಾದಿಂದ ಬೆಚ್ಚಿ ಬಿದ್ದಿದ್ದ ಈ ಯುವಕರು ತಮ್ಮ-ತಮ್ಮ ಕುಟುಂಬ ಸೇರಿಕೊಳ್ಳುವ ಮಹಾದಾಸೆಯಿಂದ ಮೇ 2ರಂದು ಥಾಣೆಯಿಂದ ಸೈಕಲ್ ನಲ್ಲಿ ಹೊರಟು ಲೋನಾವಾಲಾ, ಖಂಡಾಲಾ, ನಿಪ್ಪಾಣಿ ಸೇರಿದಂತೆ ದಾರಿಯುದ್ದಕ್ಕೂ ಸಿಗುವ ಎಲ್ಲಾ ಚೆಕ್ ಪೋಸ್ಟ್ ಗಳನ್ನು ತಪ್ಪಿಸಿಕೊಂಡು ಅಡ್ಡದಾರಿಯಲ್ಲಿ ಪ್ರಯಾಣಿಸಿದ್ದಾರೆ. ಆದರೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಸಮೀಪ ಇರುವ ಹುಲುಗಡ್ಡೆ ಚೆಕ್ ಪೋಸ್ಟ್ ಬಳಿ ಪೊಲೀಸರು ಹಾಗೂ ಅಧಿಕಾರಿಗಳು ವಿಚಾರಿಸಿದಾಗ ಈ ಯುವಕರ ತಂಡ ಮುಂಬೈನಿಂದ ಬಂದಿರುವುದು ಬೆಳಕಿಗೆ ಬಂದಿದೆ.
Advertisement
ಮುಂಬೈನಿಂದ ಬಂದಿದ್ದ ಯುವಕರ ತಂಡವನ್ನು ತಕ್ಷಣವೇ ವಶಕ್ಕೆ ಪಡೆದ ಪೊಲೀಸರು, ಅಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಿದ್ದಾರೆ. ಇದೀಗ ಈ ಎಲ್ಲಾ 6 ಮಂದಿ ಯುವಕರಿಗೆ ಕೊರೊನಾ ತಪಾಸಣೆ ನಡೆಸಿ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ.