– ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅನಿಸ್ತಿಲ್ಲ
ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಸಹ ನಟ ಸುಶೀಲ್ ಕುಮಾರ್ ಸಾವಿಗೆ ‘ಸಲಗ’ ಚಿತ್ರತಂಡ ಕಂಬನಿ ಮಿಡಿದಿದೆ.
ಸುಶೀಲ್ ಕುಮಾರ್ ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳ ಹಿಂದೆ ಮಂಡ್ಯಗೆ ಬಂದು ನೆಲೆಸಿದ್ದರು. ಆದರೆ ಸುಶೀಲ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಕಷ್ಟ ಏನಾದರೂ ಹೇಳಿಕೊಂಡಿದ್ದರೆ. ನಾವಾದರೂ ಸಹಾಯ ಮಾಡುತ್ತಿದ್ವಿ. ಆದರೆ ಸುಶೀಲ್ ಯಾರಿಗೂ ತಮ್ಮ ಕಷ್ಟ ಹೇಳಿಕೊಳ್ಳದೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ನಟ ದುನಿಯಾ ವಿಜಿ ಕೂಡ ಸುಶೀಲ್ ಸಾವಿಗೆ ಕಂಬನಿ ಮಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುಶೀಲ್ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡುತ್ತಿದ್ದರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ. ಆದರೆ ಅದೇನಾಯ್ತೋ ಗೊತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬಲು ಆಗುತ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಂದರೆ ಏನು? ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದರೆ ಬಹುಶಃ ಭೂಮಿಯಲ್ಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ” ಎಂದು ಬೇರಸರಿಂದ ಹೇಳಿದ್ದಾರೆ.
ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಮ ಜೊತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇನೇ ನಮಗಿಷ್ಟೊಂದು ನೋವಾಗುತ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ. ಸತ್ತ ಮೇಲೆ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸುತ್ತಿಲ್ಲ. ಯಾಕೆಂದರೆ ಪರಿಸ್ಥಿತಿ ಆ ರೀತಿ ಇದೆ. ಜನ ಕೊರೊನಾ ರೋಗಕ್ಕಷ್ಟೇ ಭಯಪಡುತ್ತಿಲ್ಲ. ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.
ಹಾಗಾಗಿ ನನ್ನ ಮನವಿ ಅಂಥವರಿಗೂ ಕೂಡ ಆಗಿದೆ. ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ, ವೇದನೆ” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.
“ನೀವೇನೂ ಸತ್ತು ಹೋಗುತ್ತೀರಿ, ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜೊತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡುತ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು ಎಂದು ಪ್ರಶ್ನೆ ಮಾಡಿದರು. ಸುಶೀಲ್ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂತಹ ದುಃಖ ಎದುರಿಸುವ ಸಂದರ್ಭ ಬಾರದಿರಲಿ” ಎಂದು ದುನಿಯಾ ವಿಜಯ್ ಸುಶೀಲ್ ಸಾವಿಗೆ ಕಂಬನಿ ಮಿಡಿದಿದ್ದಾರೆ.