ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನುಭವಿ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ 2020ರ ಆವೃತ್ತಿಯ ಅಂಕಪಟ್ಟಿಯಲ್ಲಿ ಅರ್ಹವಾಗಿಯೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಸಿಎಸ್‍ಕೆ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತ್ತು. 175 ರನ್ ಮೊತ್ತವನ್ನು ಬೆನ್ನತ್ತಿದ್ದ ಸಿಎಸ್‍ಕೆ 131 ರನ್ ಗಳಿಗೆ ಆಲೌಟ್ ಆಯ್ತು.
ಚೆನ್ನೈ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಚೆನ್ನೈ ಬ್ಯಾಟ್ಸ್ ಮನ್ಸ್ ಸರಿಯಾಗಿ ಆಡುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹೋಗುವ ಗ್ಲುಕೋಸ್ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ.
Chennai ke batsman simply not getting going. Glucose chadwaake aana padega next match se batting karne.
— Virender Sehwag (@virendersehwag) September 26, 2020
ಸುರೇಶ್ ರೈನಾ, ರಾಯುಡು ಅನುಪಸ್ಥಿತಿಯಲ್ಲಿ ಚೆನ್ನೈ ತಂಡದ ಬ್ಯಾಟಿಂಗ್ ಪ್ರದರ್ಶನ ಕಳಪೆಯಿಂದ ಕೂಡಿದೆ. ಅದರಲ್ಲೂ ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಸಿಎಸ್‍ಕೆ ಅಭಿಮಾನಿಗಳು ಕೂಡ ಬ್ಯಾಟಿಂಗ್ ಶೈಲಿಯನ್ನು ಟೀಕಿಸಿದ್ದಾರೆ. ಅಲ್ಲದೇ ಡೆಲ್ಲಿ ವಿರುದ್ಧದ ಪಂದ್ಯದಲ್ಲಿಯೂ ನಾಯಕ ಧೋನಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದಿದ್ದು ಕೂಡ ಟೀಕೆಗೆ ಗುರಿಯಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಪರ ಧವನ್, ಪೃಥ್ವಿ ಶಾ 94 ರನ್ ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದ್ದರು. 20 ವರ್ಷದ ಪೃಥ್ವಿ ಶಾ 43 ಎಸೆತಗಳಲ್ಲಿ 64 ರನ್ ಸಿಡಿಸಿದ್ದರು. ಧವನ್ ಔಟಾದ ಬಳಿಕ ನಾಯಕ ಅಯ್ಯರ್, ಪೃಥ್ವಿ ಶಾರೊಂದಿಗೆ ಕೂಡಿಕೊಂಡು 58 ರನ್‍ಗಳ ಜೊತೆಯಾಟ ನೀಡಿದ್ದರು.
ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಪಡೆದಿರುವ ಚೆನ್ನೈ ತಂಡದ ಮುಂದಿನ ಪಂದ್ಯಕ್ಕೆ ಒಂದು ವಾರಗಳ ಸಮಯವನ್ನು ಹೊಂದಿದೆ. ಸಿಎಸ್‍ಕೆ ಅಕ್ಟೋಬರ್ 2 ರಂದು ಮುಂದಿನ ಪಂದ್ಯವನ್ನು ಆಡಲಿದ್ದು, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ.