ಮುಂದಿನ ದಿನಗಳಲ್ಲಿ ಏನಾಗುತ್ತದೆ ಅಂತ ಹೇಳಲು ನಾನು ಜ್ಯೋತಿಷಿ ಅಲ್ಲ: ಅಶ್ವಥ್ ನಾರಾಯಣ್

Public TV
3 Min Read
ASHWATH NARAYAN

– ಮಲ್ಲೇಶ್ವರದಲ್ಲಿ ನಾನು ಭದ್ರವಾಗಿದ್ದೇನೆ

ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾರೂ ಲಕ್ಷ್ಮಣ ರೇಖೆ ದಾಟಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿ ಅಲ್ಲ. ಈಗ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಉಪಮುಖ್ಯಮಂತ್ರಿ ಡಾ.ಸಿ. ಎನ್ ಅಶ್ವಥ್ ನಾರಾಯಣ್ ಹೇಳಿದರು.

ರಾಮನಗರದಲ್ಲಿ ರೋಟರಿ ಬಿಜಿಎಸ್ ಆಸ್ಪತ್ರೆ (ಕೋವಿಡ್‍ಯೇತರ) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕತ್ವ ಬದಲಾವಣೆ ಸಂಬಂಧ ನಾನು ಏನನ್ನೂ ಹೇಳುವುದಿಲ್ಲ. ಯಾರಾದರು ಹೇಳಿಕೆಗಳನ್ನು ನೀಡಿದ್ದರೆ ಅವರನ್ನೇ ಕೇಳಿ. ಮುಂದಿನ ದಿನಗಳಲ್ಲಿ ನಾನು ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ಮುಂದುವರಿಯುತ್ತೇನೋ ಇಲ್ಲವೋ ಎಂದು ಹೇಳಲು ನನಗೆ ಭವಿಷ್ಯ ಹೇಳುವುದು ಗೊತ್ತಿಲ್ಲ ಎಂದರು.

Ashwath Narayana medium

ಸದ್ಯಕ್ಕೆ ನನಗೆ ರಾಮನಗರ ಜಿಲ್ಲೆಯ ಉಸ್ತುವಾರಿಯಾಗಿ ಸಿಎಂ ಅವರು ಅವಕಾಶ ನೀಡಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೆನೆ ಎಂದು ಅವರು ಹೇಳಿದರು.

ಅರುಣ್ ಸಿಂಗ್ ಹೇಳಿದ್ದಾಗಿದೆ:
ಈಗಾಗಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗಾಗಲೇ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದಾರೆ. ಅರುಣ್ ಸಿಂಗ್ ಅವರ ಭೇಟಿ ಹಾಗೂ ಸಭೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎಲ್ಲವೂ ಸರಿಹೋಗುತ್ತದೆ ಎಂದು ಅವರು ಪುನುರುಚ್ಛರಿಸಿದರು.

ARUN SINGH 1 medium

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪದೇಪದೆ ಸಮಾಲೋಚನೆ ನಡೆಯುತ್ತಲೇ ಇರುತ್ತದೆ. ಇದರಲ್ಲಿ ತಪ್ಪೇನಿದೆ. ಸರಕಾರ ಉತ್ತಮವಾಗಿ ಕೆಲಸ ಮಾಡುವುದು. ಪಕ್ಷವನ್ನು ಬಲಿಷ್ಠವಾಗಿ ಮುನ್ನಡೆಸುವುದು, ಜನಾಭಿಪ್ರಾಯ ಸಂಗ್ರಹಿಸುವುದು, ಜನರ ಬಳಿ ವಿಶ್ವಾಸ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ಹೇಳಿದರು.

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಇಲ್ಲ:
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ನಾವು ಅಧಿಕಾರ ಪಡೆದಿರುವುದೇ ಜನರ ಸೇವೆಗೆ ಎನ್ನುವುದನ್ನು ಮರೆಯಬಾರದು. ಸಚಿವರಾದ ಸಿ.ಪಿ ಯೋಗೇಶ್ವರ್, ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲಾರೆ. ನೀವು ಅವರನ್ನೇ ಕೇಳಿ ಉತ್ತರ ಪಡೆದುಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು. ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್

yogeshwar 1 medium

ಮುಂದಿನ ಚುನಾವಣೆಗೆ ಪಕ್ಷದ ಮೂಲಕವೇ ಮತಯಾಚನೆ ನಡೆಸುತ್ತೇವೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಎದುರಿಸುವಷ್ಟೇ ನಮ್ಮ ಗುರಿ. ಅದಕ್ಕೆ ಈಗಿನಿಂದಲೇ ಸಿದ್ಧತೆ ನಡೆದಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್ ಝೀರೊ: ರೇವಣ್ಣ

ನಮ್ಮ ಬಿಜೆಪಿ ಪಕ್ಷಕ್ಕೆ ಶಕ್ತಿ, ನಿರ್ದಿಷ್ಟ ಗುರಿ ಇದೆ. ಮುಂದಿನ ಹಾದಿಗಳ ಬಗ್ಗೆ ಪಕ್ಷವೇ ನಿರ್ಧಾರ ಮಾಡುತ್ತದೆ. ಈಗ ಯಾವುದೇ ಗೊಂದಲ ಇದ್ದರೂ ಪರಿಹಾರವಾಗುತ್ತದೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರಕಾರ ನಡೆಯುತ್ತಿದೆ. ನಾನು ಸಹ ಅವರ ಸಂಪುಟದಲ್ಲೇ ಇದ್ದೇನೆ. ಸಚಿವ ಸಂಪುಟ ಪುನಾ ರಚನೆ ಬಗ್ಗೆ ಈಗ ಏನೇ ಹೇಳಿದರೂ ಗೊಂದಲ ಸೃಷ್ಟಿಯಾಗುತ್ತದೆ. ಆ ಬಗ್ಗೆ ಕೂಡ ನಾನು ಏನನ್ನೂ ಹೇಳುವುದಿಲ್ಲ ಎಂದರು.

ESHWARAPPA 1 1 medium

ಈಗಾಗಲೇ ಪಕ್ಷದ ವರಿಷ್ಠರು ಹೇಳಿರುವ ಮಾತುಗಳನ್ನು ನಾನು ಮತ್ತೆ ಮತ್ತೆ ಮಾತನಾಡುವುದಿಲ್ಲ. ಯಾವಾಗಲು ಸ್ಪರ್ಧೆ ಇರಬೇಕು. ಆಸೆ ಇರಬೇಕು. ಇಂದು ಉಸ್ತುವಾರಿ ಸಚಿವನಾಗಿ ನಾನಿದ್ದೇನೆ. ಮುಂದೆ ಇನ್ಯಾರೊ ಇರುತ್ತಾರೆ. ಇದರಲ್ಲಿ ತಪ್ಪೇನು ಎಂದು ಜಿಲ್ಲಾ ಉಸ್ತುವಾರಿ ಕುರಿತಂತೆ ಡಿಸಿಎಂ ಪ್ರತಿಕ್ರಿಯಿಸಿದರು.

ಮಾಗಡಿಯಿಂದ ಸ್ಪರ್ಧೆ ಇಲ್ಲ:
ಮಾಗಡಿಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಯಾರು ಘೋಷಣೆ ಮಾಡಿದರೊ ಅವರನ್ನೇ ಕೇಳಬೇಕು. ಅಂತಹ ಯಾವುದೇ ಉದ್ದೇಶ ನನಗೆ ಇಲ್ಲ. ಚುನಾವಣೆಗಾಗಿ ನಾನು ಕೆಲಸ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಮಲ್ಲೇಶ್ವರಂ ಕ್ಷೇತ್ರದಲ್ಲಿ ಭದ್ರವಾಗಿದ್ದೇನೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *