– ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ
ಮಡಿಕೇರಿ: 6ನೇ ವೇತನ ಆಯೋಗ ಜಾರಿ ಮಾಡುವಂತೆ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ ಇದ್ದು ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ ಸರ್ಕಾರಕ್ಕೆ ಮತ ಹಾಕುವುದಿಲ್ಲ ಎಂದು ಪ್ರತಿಭಟನಾ ನಿರತ ನೌಕರರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಚಾಲಕ ಕಂ ನಿರ್ವಾಹಕ ಮನು, ನಾನು ಕೂಡ ಪಕ್ಕ ಹಿಂದೂ ಕಾರ್ಯಕರ್ತ, ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದೆ. ಆದರೆ ಪ್ರತಿಭಟನೆ ಕೈಬಿಟ್ಟು ಬಸ್‍ಗಳನ್ನು ಚಲಾಯಿಸುವಂತೆ ನನಗೆ ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಪುತ್ತೂರು ವಿಭಾಗದ ಅಧಿಕಾರಿಗಳು ಮಡಿಕೇರಿಯಲ್ಲಿ ಪ್ರತಿಭಟನೆ ನೇತೃತ್ವ ವಹಿಸುತ್ತಿದ್ದ ಮುಖಂಡರನ್ನು ರಾಮನಗರ ಡಿಪೋಗೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ನಾವು ಇಂತಹ ಬೆದರಿಕೆಗೆಲ್ಲ ಹೆದರುವುದಿಲ್ಲ ಯಡಿಯೂರಪ್ಪ, ಲಕ್ಷ್ಮಣ ಸವದಿ ಅವರಿಗೆ ನಾವು ಹೆದರುವುದಿಲ್ಲ. ಇದೊಂದು ಹಠಮಾರಿ ಸರ್ಕಾರವಾಗಿದ್ದು, ಮುಂದಿನ ಬಾರಿ ನಾವು ಬಿಜೆಪಿಗೆ ವೋಟು ಹಾಕಲ್ಲ. ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ ಘಟಕದ ಟಿಸಿ ನೌಕರರ ಕ್ವಾಟ್ರಸ್‍ಗಳಲ್ಲಿ ಇದ್ದ ಹನ್ನೊಂದು ಕುಟುಂಬಗಳ ಕೆಎಸ್‍ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗಾಗಿ ಕ್ವಾಟ್ರಸ್ ಮಾಡಲಾಗಿದೆ. ಇಲ್ಲದಿದ್ದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆಯ ನೊಟೀಸ್ ನೀಡಲಾಗಿದೆ. ಇದಕ್ಕೂ ಅಸಮಾಧಾನ ವ್ಯಕ್ತಪಡಿಸಿರುವ ನೌಕರರ ಕುಟುಂಬದವರು, ಎಚ್‍ಆರ್‍ಎ ಕಟ್ ಮಾಡಿಕೊಂಡು ನಮಗೆ ಕ್ವಾಟ್ರಸ್ ನೀಡಿದ್ದಾರೆ. ಒಂದು ಮನೆಯಲ್ಲಿ ಬಾಡಿಗೆ ಇದ್ದರೂ ಒಂದು ತಿಂಗಳ ಮುಂಚಿತವಾಗಿ ಮಾಹಿತಿ ನೀಡಿ ಮನೆ ಖಾಲಿ ಮಾಡಿಸುತ್ತಾರೆ. ಆದರೆ ಇದೀಗ ಕನಿಷ್ಠ ಮಾನವೀಯತೆ ಇಲ್ಲದವರಂತೆ ಸರ್ಕಾರ ನಡೆದುಕೊಳ್ಳುತ್ತಿದ್ದು, ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ಎಂದರೆ ಎಲ್ಲಿಗೆ ಹೋಗಬೇಕು. ಕಳೆದ 20 ವರ್ಷಗಳಿಂದ ಸಂಸ್ಥೆಗಾಗಿ ದುಡಿದಿದ್ದೇವೆ. ಇಂದಿಗೂ ಕೇವಲ 10 ಸಾವಿರ ಸಂಬಳ ಸಿಗುತ್ತಿದೆ. ಕಳೆದ ಒಂದು ವರ್ಷದಿಂದ ಓಟಿಯೂ ಸಿಗುತ್ತಿಲ್ಲ. ಹೀಗಾದರೆ ನಮ್ಮ ಬದುಕು ಹೇಗೆ ಎನ್ನುವುದು ನೌಕರರ ಕುಟುಂಬದವರ ಪ್ರಶ್ನೆಯಾಗಿದೆ.