– ಪ್ರವಾಹಕ್ಕೆ ಸಿಲುಕಿದ ರಾಜ್ಯದ 18 ತಾಲೂಕು, 131 ಗ್ರಾಮಗಳು
ಬೆಂಗಳೂರು: ಮುಂದಿನ ಎರಡ್ಮೂರು ದಿನಗಳಲ್ಲಿ ಕೃಷ್ಣಾ ನದಿಯ ಹರಿವು ಹೆಚ್ಚಾಗುವುದರಿಂದ ತೀವ್ರ ಪ್ರವಾಹ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ನಿಭಾಯಿಸಲು ಮತ್ತು ಪ್ರವಾಹ ಕಾರ್ಯಾಚರಣೆಗಾಗಿ 4 ಎನ್‍ಡಿಆರ್ ಎಫ್ ತಂಡಗಳನ್ನು ರಾಯಚೂರು, ಕೊಡಗು, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೂರ್ವ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿರುವ ತಂಡವನ್ನು ಶಿವಮೊಗ್ಗಕ್ಕೆ ಕಳುಹಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.
ರಾಜ್ಯದ ಒಟ್ಟು 13 ಪ್ರಮುಖ ಜಲಾಶಯಗಳಲ್ಲಿನ ಒಟ್ಟು ಸಂಗ್ರಹಣ 860 ಟಿಎಂಸಿಗಳ ಪೈಕಿ ಇಲ್ಲಿಯವರೆಗೂ 561.42 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಟ್ಟು ಸಂಗ್ರಹಣದ ಶೇ.65ರಷ್ಟಿದೆ. ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದ ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಿಂದಾಗಿ ಅಲ್ಲಿ ಜಲಾಶಯಗಳು ಪೂರ್ಣ ಮಟ್ಟ ತಲುಪಿದ್ದು, ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಹಾಗಾಗಿ ನಮ್ಮ ರಾಜ್ಯದ ಕೃಷ್ಣಾ ನದಿ ಪಾತ್ರದ ಎಲ್ಲಾ ಜಲಾಶಯಗಳ ಪೂರ್ಣ ಮಟ್ಟ ತಲುಪವದರಿಂದ ಒಳಹರಿವಿನಷ್ಟೇ ಹೊರ ಹರಿವು ಹೆಚ್ಚಿಸಲಾಗಿದೆ. ಆದ್ದರಿಂದ ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗುವ ಸಾಧ್ಯತೆ ಇದೆ.
ಜುಲೈ 23ರಂದು ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಧಾರವಾಡ, ಹಾಸನ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಭಾರೀ ದಾಖಲೆ ಪ್ರಮಾಣದ ಮಳೆಯಾಗಿದೆ. ಉತ್ತರ ಕನ್ನಡದ ಹಲವು ಭಾಗಗಳಲ್ಲಿ 24 ಗಂಟೆಗಳಲ್ಲಿಯೇ 300 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಅಂಕೋಲಾ ತಾಲೂಕಿನ ಡೋಗ್ರಿ ಪಂಚಾಯಿತಿಯಲ್ಲಿ 541 ಮಿ.ಮೀ ಮತ್ತು ಶಿರಸಿ ತಾಲೂಕಿನ ಹಲವೆಡೆ 400 ಮಿ.ಮೀ.ಗೂ ಅಧಿಕ ಮಳೆಯಾಗಿದೆ.
ಹಾಸನ ಮತ್ತು ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿ ಸಂಪರ್ಕ ಕಡಿತಗೊಂಡಿದ್ದು, ಬೇಲೂರು ಮಾರ್ಗವಾಗಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮಕೈಗೊಂಡಿದೆ. ರಾಜ್ಯದ ಕರಾವಳಿ, ಮಲೆನಾಡಿಗೆ ಹೊಂದಿಕೊಂಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಂದಿನ 2-3 ದಿನಗಳವರೆಗೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಮಳೆಯ ರಣಾರ್ಭಟ, ಚಿಕ್ಕೋಡಿಯಲ್ಲಿ ಪ್ರವಾಹ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ
ಪ್ರವಾಹದಿಂದಾಗಿ ರಾಜ್ಯದಲ್ಲಿ ಮೂರು ಸಾವು ಆಗಿದ್ದು, ಉತ್ತರ ಕನ್ನಡದ ಇಬ್ಬರು ಕಾಣೆಯಾಗಿದ್ದಾರೆ. ರಾಜ್ಯದ 18 ತಾಲೂಕು, 131 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, 830 ಮನೆಗಳಿಗೆ ಹಾನಿಯಾಗಿದೆ. ಸದ್ಯ ರಾಜ್ಯದಲ್ಲಿ 80 ಕಾಳಜಿ ಕೇಂದ್ರ ತೆರೆಯಲಾಗಿದ್ದು, 8733 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದುವರಿಯಲಿದೆ ಭಾರೀ ಮಳೆ – ಹವಾಮಾನ ಇಲಾಖೆ