ಚಿಕ್ಕೋಡಿ/ಬೆಳಗಾವಿ: ಮುಂದಿನ ಅವಧಿ ವರೆಗೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರೇ ಮುಂದುವರಿಯುವ ತೀರ್ಮಾನ ಆಗಿದೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಜಿಲ್ಲೆಯ ಅಥಣಿಯಲ್ಲಿ ಸಿಎಂ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಎಂಬುದು ಊಹಾಪೋಹ, ಬರಿ ಗಾಳಿಮಾತು ಅಷ್ಟೆ. ಮುಂದಿನ ಅವಧಿವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಕುರಿತು ಈಗಾಗಲೇ ನಿರ್ಧಾರವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಿಂದ ಮುಖ್ಯಮಂತ್ರಿ ನೇಮಕಾತಿ ವಿಚಾರದ ಕುರಿತು ಪ್ರಸ್ತಾಪವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಹಾಗೂ ಕೇಂದ್ರ ಸರ್ಕಾರದ ಹಣಕಾಸಿನ ಬಿಡುಗಡೆ ಬಗ್ಗೆ ಸಮಾಲೋಚನೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ಸಚಿವರನ್ನು ಭೇಟಿ ಮಾಡಲಿದ್ದಾರೆ. ಇದು ರಾಜ್ಯದ ಅಭಿವೃದ್ಧಿ ಹಾಗೂ ಹೆಚ್ಚಿನ ಹಣಕಾಸು ಬಿಡುಗಡೆಗೆ ನಡೆಯುವ ಸಾಮನ್ಯ ಪ್ರಕ್ರಿಯೆ. ಅಲ್ಲದೆ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಿ, ಒಪ್ಪಿಗೆ ಪಡೆದು ರಾಜ್ಯದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ತೀರ್ಮಾನ ಮಾಡಲಿದ್ದಾರೆ. ಮುಖ್ಯಮಂತ್ರಿಯವರ ಯಾವುದೇ ತೀರ್ಮಾನಕ್ಕೆ ನಮ್ಮೆಲ್ಲರ ಸಹಮತ ಇದೆ ಎಂದು ತಿಳಿಸಿದರು.
ಸಚಿವ ರಮೇಶ್ ಜಾರಕಿಹೊಳಿ ಮಹರಾಷ್ಟ್ರದ ಬಿಜೆಪಿ ಮುಖಂಡರ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಇದೇ ವೇಳೆ ಹೇಳಿದರು.