– ತನ್ನ ಮನೆಯಲ್ಲಿ ಮಕ್ಕಳನ್ನ ಬಿಟ್ಟು ಪರಾರಿ
– ಸ್ನೇಹಿತನ ಮನೆಯಲ್ಲಿ ಸಿಕ್ಕಿಬಿದ್ದ
ತಿರುವನಂತಪುರಂ: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ಪುಥಾಂಚಿರಾದಲ್ಲಿ ಬಂಧಿಸಲಾಗಿದೆ.
ರಹಮತ್ (30) ಮೃತ ಪತ್ನಿ. ಆರೋಪಿಯನ್ನು ಶಮ್ಜಾದ್ ಎಂದು ಗುರುತಿಸಲಾಗಿದೆ. ಎರ್ನಾಕುಲಂ ಜಿಲ್ಲೆಯ ವಡಕ್ಕೇಕರ ಮೂಲದ ಆರೋಪಿ ಶಮ್ಜಾದ್ ತನ್ನ ಮನೆಯಲ್ಲಿ ಪತ್ನಿಯನ್ನು ಕೊಂದಿದ್ದನು. ಕೆಲವು ಕುಟುಂಬ ಸಮಸ್ಯೆಗಳೇ ಕೊಲೆಗೆ ಕಾರಣವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯ ನಂತರ ಆರೋಪಿ ಶಮ್ಜಾದ್ ತನ್ನ 9 ಮತ್ತು 3 ವರ್ಷದ ಇಬ್ಬರು ಮಕ್ಕಳೊಂದಿಗೆ ವಡಕ್ಕೇಕರದಲ್ಲಿರುವ ತನ್ನ ಮನೆಗೆ ಹೋಗಿದ್ದನು. ಅಲ್ಲಿ ತನ್ನ ಮಕ್ಕಳನ್ನು ಮನೆಯಲ್ಲಿರಿಸಿ ತಕ್ಷಣ ಅಲ್ಲಿಂದ ಪರಾರಿಯಾಗಿದ್ದನು. ಇತ್ತ ಅವನ ನಡವಳಿಕೆಯಿಂದ ನೆರೆಹೊರೆಯವರಿಗೆ ಅನುಮಾನ ಬಂದಿದೆ. ತಕ್ಷಣ ಅವರು ರಹಮತ್ ಮನೆಯವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಅವರು ಮನೆಯೊಳಗೆ ಹೋಗಿ ನೋಡುವಷ್ಟರಲ್ಲಿ ರಹಮತ್ ಮೃತಪಟ್ಟಿದ್ದಳು.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಖಚಿತ ಮಾಹಿತಿ ಮೇರೆಗೆ ಎರ್ನಾಕುಲಂನ ಸ್ನೇಹಿತನ ಮನೆಯಲ್ಲಿ ಆರೋಪಿ ಶಮ್ಜಾದ್‍ನನ್ನು ಪೊಲೀಸ್ ಬಂಧಿಸಿದ್ದಾರೆ. ಶಮ್ಜಾದ್ 10 ವರ್ಷಗಳಿಂದ ವಿದೇಶದಲ್ಲಿದ್ದನು. ಆದರೆ ಇತ್ತೀಚೆಗೆ ಭಾರತಕ್ಕೆ ವಾಪಸ್ ಬಂದು ಮೀನು ಮಾರಾಟ ವ್ಯವಹಾರವನ್ನು ಪ್ರಾರಂಭಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದೇವೆ. ಮರಣೋತ್ತರ ವರದಿಯ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ. ಆದರೆ ಪ್ರಾಥಮಿಕ ತನಿಖೆಯ ಪ್ರಕಾರ, ರಹಮತ್‍ನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.