ತಿರುವನಂತಪುರಂ: ಮುಂಜಾನೆ ದೇವಸ್ಥಾನಕ್ಕೆಂದು ತೆರಳಿದ್ದ ಮಹಿಳೆಯ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಕೇರಳದ ಆಲಪ್ಪುಳದ ಥಾಮರಕ್ಕುಳಂ ಸಮೀಪದ ಪುತುಚಿರಾದಲ್ಲಿ ನಡೆದಿದೆ.
ಮೃತ ದುರ್ದೈವಿ ಮಹಿಳೆಯನ್ನು 33 ವರ್ಷದ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಈಕೆ ಗುರುವಾರ ಮುಂಜಾನೆ 5.30ರ ಸುಮಾರಿಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದಳು.
ಇತ್ತ ದೇವಸ್ಥಾನಕ್ಕೆ ತೆರಳಿದ್ದ ವಿಜಯಲಕ್ಷ್ಮಿ ಗಂಟೆಗಳೇ ಕಳೆದರೂ ವಾಪಸ್ ಬರದಿದ್ದರಿಂದ ಪೋಷಕರು ಆತಂಕಗೊಂಡಿದ್ದಾರೆ. ಅಲ್ಲದೆ ಆಕೆಯ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ವಿಜಯಲಕ್ಷ್ಮಿ ಮೃತದೇಹ ಕೆರೆಯೊಂದರಲ್ಲಿ ಪತ್ತೆಯಾಗಿದೆ.
ವಿಜಯಲಕ್ಷ್ಮಿ ಪತಿ ಕೇರಳದ ಥಾರಮಕ್ಕುಳಂ ನಿವಾಸಿ. ಕಳೆದ 4 ವರ್ಷಗಳಿಂದ ತನ್ನ ವಿಜಯಲಕ್ಷ್ಮಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಳು. ಆದರೆ ಕಳ್ಳತನದ ಪ್ರಕರಣಗಳಲ್ಲಿ ಪ್ರದೀಪ್ ಅನೇಕ ಬಾರಿ ಪೊಲೀಸರ ಅತಿಥಿಯಾಗಿದ್ದನು.
ಕಳೆದ ತಿಂಗಳು ಮತ್ತೆ ಪೊಲೀಸರು ಪ್ರದೀಪ್ ನನ್ನು ಬಂಧಿಸಿದಾಗ ಆಕೆ ತವರಿಗೆ ಹೋಗಿ ನೆಲೆಸಿದ್ದಳು. ಸದ್ಯ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕೃನ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.