– ಪರೀಕ್ಷೆ ಬೇಡ ಎಂಬುದಕ್ಕೆ ನನ್ನ ವಿರೋಧ ಇದೆ
– ಅಮಿತ್ ಶಾಗೆ ಒಂದು, ನಮ್ಗೊಂದು ನಿಯಮನಾ?
ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಡ ಎಂಬುದಕ್ಕೆ ನನ್ನ ವಿರೋಧ ಇದೆ. ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಲೇ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10ನೇ ತರಗತಿ ಪರೀಕ್ಷೆ ನಡೆಸಲೇಬೇಕು. ಬೇಡ ಎನ್ನುವುದು ಸರಿಯಲ್ಲ. ಇದು ವಿದ್ಯಾರ್ಥಿಗಳ ಮಹತ್ವದ ಘಟ್ಟವಾಗಿರುತ್ತದೆ ಎಂದ ಅವರು, ಇದೇ ವೇಳೆ ದಾಖಲಾತಿ ಶುಲ್ಕ ಕಡಿಮೆ ಮಾಡಬೇಕೆಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಸರ್ಕಾರ ಎಲ್ಲವನ್ನೂ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿ. ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳು ಓದುತ್ತಿದ್ದಾರೆಂದು ಗಮನಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಡಿಕೆಶಿ ಪದಗ್ರಹಣಕ್ಕೆ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪರಿಂದ ಈ ರೀತಿಯ ಕೀಳುಮಟ್ಟದ ರಾಜಕಾರಣ ನಿರೀಕ್ಷೆ ಮಾಡಿರಲಿಲ್ಲ. ದೆಹಲಿಯಲ್ಲಿ ಅಮಿತ್ ಶಾಗೆ ಒಂದು ರೂಲ್ಸ್. ನಮಗೆ ಒಂದು ನಿಯಮನಾ? ನಾವು ಸಾಮಾಜಿಕ ಅಂತರ ಕಾಯ್ದುಕೊಂಡೇ ಕಾರ್ಯಕ್ರಮ ನಡೆಸುತ್ತಿದ್ದೆವು ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು.
ಮೊದಲ ಮೌಖಿಕವಾಗಿ ಕೇಳಿದಾಗ ಸರ್ಕಾರ ಒಪ್ಪಿತ್ತು. ಪತ್ರದ ಮೂಲಕ ಅನುಮತಿ ಕೇಳಿದಾಗ ಅನುಮತಿ ನಿರಾಕರಿಸಲಾಗಿದೆ. ಇದನ್ನು ನಾವು ರಾಜಕೀಯವಾಗಿಯೇ ಹೆದರಿಸುತ್ತೇವೆ. ಇನ್ನೊಮ್ಮೆ ಪತ್ರ ಕೊಡುವುದಾಗಲಿ, ಮನವಿ ಮಾಡುವುದಾಗಲಿ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸಂಘಟನೆ ಆಗುತ್ತದೆ ಎಂಬ ಆತಂಕದಲ್ಲಿ ಈ ರೀತಿ ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಂತರ ದೇವೇಗೌಡರು ರಾಜ್ಯಸಭೆಗೆ ಆಯ್ಕೆ ವಿಚಾರವಾಗಿ ಮಾತನಾಡಿ, ಅವರ ಆಯ್ಕೆ ಬಗ್ಗೆ ನನಗೇನು ಗೊತ್ತಿಲ್ಲ. ಕಾಂಗ್ರೆಸ್‍ನಿಂದ ಒಂದು ಅಭ್ಯರ್ಥಿ ಹಾಕಲು ನಿರ್ಧಾರ ಮಾಡಲಾಗಿತ್ತು. ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಫೈನಲ್ ಮಾಡಿದ್ದೇವು. ಈಗ ಅವರು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ್ದದ್ದು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.