ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮುಂಗಾರು ಚುರುಕು ಪಡೆದಿದೆ. ನಾಳೆಯಿಂದ 9 ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾದಗಿರಿಯ ಶಹಾಪುರದಲ್ಲಿ ಭಾರೀ ಮಳೆ ಆಗಿದ್ದು, 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಎರಡು ಕಾರುಗಳು ಜಲಾವೃತಗೊಂಡಿವೆ. ಬೀದರ್ – ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೂ ಸಹ ಮಳೆ ನೀರು ನುಗ್ಗಿದ್ದು, ರಸ್ತೆ ಸಹ ಜಲಾವೃತಗೊಂಡಿದೆ. ಜಿಲ್ಲೆಯ ಪ್ರಮುಖ, ಕೆರೆ,ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ರಾಯಚೂರಲ್ಲಿ ತಡರಾತ್ರಿ ಮಳೆ ಅವಾಂತರ ಸೃಷ್ಟಿಸಿದೆ. ಇಡಪನೂರಿನ ಹಳ್ಳದ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಬೈಕ್ ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ಬಂದ್ ಆಗಿದೆ. ಕಲಬುರಗಿಯ ಜಂಬಗಾ ಬಿ ಗ್ರಾಮದ ಮಳೆ ಹೊಡೆತಕ್ಕೆ ಸೇತುವೆಯೊಂದು ಕೊಚ್ಚಿ ಹೋಗಿದೆ. ರಸ್ತೆ ಒಡೆದು ಜಮೀನು ಗಳಿಗೆ ನುಗ್ಗಿದ ಮಳೆ ನೀರು ನುಗ್ಗಿದೆ. ಜೆ ಆರ್ ನಗರದಲ್ಲಿ ಬಡಾವಣೆ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಜನಪರದಾಡಿದ್ದಾರೆ.
ಕಾರವಾರ, ಉಡುಪಿ, ಮಂಗಳೂರು, ಮೈಸೂರು, ಚಾಮರಾಜನಗರ, ಕೊಡಗು, ದಾವಣಗೆರೆ, ಬೀದರ್ ಜಿಲ್ಲೆಯ ಹಲವಡೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.