ಯಾದಗಿರಿ: ಮೀಸಲಾತಿ ವಿಚಾರವಾಗಿ ನಮ್ಮ ಶ್ರೀಗಳು ರಾಜೀನಾಮೆ ನೀಡು ಎಂದರೇ ನಾನು ರಾಜೀನಾಮೆ ನೀಡುತ್ತೇನೆ. ವಿರೋಧ ಪಕ್ಷದಲ್ಲಿ ಇದ್ದಾಗ ಹೇಳಿದ ಮಾತನ್ನೇ ಈಗಲೂ ಹೇಳುತ್ತೇನೆ ಎಂದು ಸುರಪುರ ಬಿಜೆಪಿ ಶಾಸಕ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜೂಗೌಡ ಹೇಳಿಕೆ ನೀಡಿದ್ದಾರೆ.
ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದಲ್ಲಿ ಇದ್ದಾಗ ರಾಜೂಗೌಡ ತಂದೆ ಶಂಬನಗೌಡ ಅಂತ ನನ್ನ ಹೆಸರು ಇತ್ತು. ಇವತ್ತು ಆಡಳಿತ ಪಕ್ಷದಲ್ಲಿದ್ದೇನೆ, ಇಂದು ಕುಡ ನನ್ನ ಹೆಸರು ರಾಜೂಗೌಡ ತಂದೆ ಶಂಬನಗೌಡ ಅಂತ ಇದೆ. ನಾನು ನನ್ನ ತಂದೆ ಮಗ, ನಾನು ನಮ್ಮ ಶ್ರೀಗಳಿಗೆ ನೀಡಿದ ಮಾತಿಗೆ ಇಂದಿಗೂ ಬದ್ಧ. ನಮ್ಮ ಶ್ರೀಗಳು ವಿಧಾನಸಭೆಯಲ್ಲಿ ಹೋರಾಟ ಮಾಡು ಎಂದರೂ ಮಾಡುತ್ತೇನೆ. ಶ್ರೀಗಳ ಆಜ್ಞೆ ಏನು ಇರುತ್ತೋ ಅದನ್ನು ಪಾಲಿಸುತ್ತೇನೆ ಎಂದರು.
ನಾವು ಇನ್ನೂ ಹುಡುಗರಿದ್ದು, ಮೈಯಲ್ಲಿ ಜೋಶ್ ಇದೆ. ಏನು ಬೇಕಾದರೂ ಮಾತನಾಡುತ್ತೇವೆ. ಆದರೆ ನಮ್ಮ ಹಿಂದೆ ಸತೀಶ್ ಜಾರಕಿಹೊಳಿಯಂತ ಹಿರಿಯರು ಇದ್ದಾರೆ. ಅವರ ಮಾರ್ಗದಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಸಂಪುಟ ವಿಸ್ತರಣೆಗೆ ನಮ್ಮ ಮುಖ್ಯಮಂತ್ರಿಗಳು ಮನಸ್ಸು ಮಾಡಿದ್ದಾರೆ. ಈ ಬಾರಿಯಾದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯಿದೆ ಎಂದರು.
ಇದೇ ವೇಳೆ ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿದ ಅವರು, ನಶೆಗೆ ಯಾವ ಫಿಲ್ಮ್ ಸ್ಟಾರ್ ಇಲ್ಲ, ಮುಖ್ಯಮಂತ್ರಿ ರಾಜಕಾರಣಿನೂ ಇಲ್ಲ. ಯಾರು ನಶೆಯಿಂದ ಬಿಳುತ್ತಾರೋ ಅಂತಹವರು ಅದಕ್ಕೆ ಒಳಗಾಗುತ್ತಾರೆ. ಯಾರು ಉಪ್ಪು ತಿನ್ನುತ್ತಾರೋ ಅವರು ನೀರು ಕುಡಿಯುತ್ತಾರೆ ಎಂದರು.
ನಟ-ನಟಿಯರನ್ನು ಮತ್ತು ರಾಜಕಾರಣಿಗಳನ್ನು ಜನರ ಫಾಲೋ ಮಾಡುತ್ತಾರೆ. ಈ ಡ್ರಗ್ಸ್ ಚಟಕ್ಕೆ ಅವರು ಬಿದ್ದ ಮೇಲೆ ನಟ-ನಟಿಯರು ನಶೆಯನ್ನು ಫಾಲೋ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳತ್ತಾರೆ. ಮುಖ್ಯ ಮಂತ್ರಿಗಳು ಮತ್ತು ಗೃಹ ಸಚಿವರು ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್‍ಪಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ರಾಜ್ಯ ಮೂಲೆ ಮೂಲೆಗಳಲ್ಲಿ ಈ ಡ್ರಗ್ ಜಾಲ ಪತ್ತೆ ಮಾಡಲು ಕ್ರಮ ತೆಗೆದುಕೊಂಡಿದ್ದಾರೆ. ಈ ಮೂಲಕ ರಾಜ್ಯವನ್ನು ಡ್ರಗ್ ಮುಕ್ತ ಮಾಡಲು ಸಿದ್ಧರಾಗಿದ್ದಾರೆ ಎಂದರು.
ಯಾರು ಪೇಜ್ 3 ಪಾರ್ಟಿ ಮಾಡುತ್ತಾರೋ ಅವರು ಈ ಡ್ರಗ್ ಚಟಕ್ಕೆ ಬೀಳುತ್ತಾರೆ. ನಾವು ಪಾರ್ಟಿ ಮಾಡುವಾಗ ನಮಗೂ ಸಾಕಷ್ಟು ಮಂದಿ ನೀನು ಕುಡಿಯಲ್ಲಾ ಅಂತ ಗೇಲಿ ಮಾಡಿದ್ದಾರೆ. ನಮ್ಮ ಮೈಂಡ್ ಸ್ಟ್ರಾಂಗ್ ಇದೆ ಅದಕ್ಕೆ ನಾವು ಅದರ ಹತ್ತಿರ ಹೋಗಲ್ಲ. ಆದರೆ ಗೇಲಿ ಮಾಡೋರ ಮಾತು ಕೇಳಲಾಗದೆ ಕೆಲವರು ರುಚಿ ನೋಡಲು ಮುಂದಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಡ್ಯಾಮೇಜಿಂಗ್ ಹೇಳಿಕೆಗಳು ಹೆಚ್ಚಾಗುತ್ತಿವೆ. ಸತ್ಯ ಯಾವುದೋ ಸುಳ್ಳು ಯಾವುದೋ ಗೊತ್ತಾಗತ್ತಿಲ್ಲ. ಪ್ರಶಾಂತ ಸಂಬರಗಿ ಎನ್ನುವರು ಜಮೀರ್ ಅಹ್ಮದ್ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಶಾಸಕರ ಮೇಲೆ ಗಂಭೀರ ಆರೋಪ ಮಾಡುವಾಗ ಸಂಬಂಧಿಸಿದ ದಾಖಲೆ ಇದ್ದರೆ ಕೇಸ್ ದಾಖಲಿಸಬೇಕು. ಜಮೀರ್ ಕ್ಯಾಸಿನೊಗೆ ಹೋದಾಗ ಸಂಜನಾ ಇದ್ದರೋ ಇಲ್ಲವೋ ಎಂಬುವುದು ತನಿಖೆಯಿಂದ ಹೊರ ಬರುತ್ತೆ ಎಂದರು.