ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷ ಇರುವಂತೆಯೇ ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳು ಮೆಲ್ಲಗೆ ಶುರುವಾಗಿವೆ. ಮೀಸಲಾತಿ ಹೋರಾಟದಲ್ಲಿ ಸಚಿವರೇ ತೊಡಗಿಕೊಂಡಿರುವ ಕಾರಣ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡಲು ಶುರು ಮಾಡಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಹಿಂದ’ ಹೋರಾಟಕ್ಕೆ ಮುಂದಾಗುತ್ತಾರೆ ಅನ್ನೋ ವದಂತಿ ದಟ್ಟವಾಗಿ ಹಬ್ಬಿದೆ.
Advertisement
ಬುಧವಾರ ಮಾಜಿ ಸಚಿವ ಹಾಗೂ ಆಪ್ತೇಷ್ಠ ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಸುದ್ದಿ ಇನ್ನಷ್ಟು ವೇಗ ಪಡೆದುಕೊಂಡಿದೆ. ಸಿದ್ದರಾಮಯ್ಯ ನಡೆಗೆ ಅವರ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಕಾಂಗ್ರೆಸ್‍ನ ಒಂದು ಬಣ ಪಕ್ಷದ ಅಧ್ಯಕ್ಷರಿಗೆ ದೂರು ಸಹ ನೀಡಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಪಕ್ಷದ ಚೌಕಟ್ಟು ಮೀರುವಂತಿಲ್ಲ. ಜಾತಿ ಸಮಾವೇಶಗಳಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಿದ್ದರಾಮಯ್ಯ ಅಹಿಂದ ಎಂದು ಹೊರಟ್ರೇ ತಪ್ಪು ಸಂದೇಶ ರವಾನೆಯಾಗುತ್ತೆ. ಬೇರೆ ಸಮುದಾಯಗಳ ಮತ ಸಿಗುವುದು ಕಷ್ಟವಾಗುತ್ತೆ. ಪಕ್ಷ ಸಾಮಾಜಿಕ ನ್ಯಾಯದ ಪರ ಇದೆ.. ಇಂಥಾ ಹೊತ್ತಲ್ಲಿ ಪ್ರತ್ಯೇಕ ಜಾತಿ ಸಮಾವೇಶಗಳು ಬೇಕಿಲ್ಲ. ಇದನ್ನು ಹೈಕಮಾಂಡ್ ಮೂಲಕ ತಡೆಯಿರಿ ಎಂದು ಸಿದ್ದರಾಮಯ್ಯ ವಿರೋಧಿ ಬಣ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ಗೆ ದೂರು ನೀಡಿದೆ ಎಂದು ತಿಳಿದು ಬಂದಿದೆ.
Advertisement
Advertisement
ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರೋ ಸಿದ್ದರಾಮಯ್ಯ, ನಾನು ‘ಹಿಂದ’ ಸಂಘಟನೆ, ಸಮಾವೇಶ ಮಾಡ್ತೀನಿ ಅಂತಾ ಎಲ್ಲೂ ಹೇಳಿಲ್ಲ. ಮಾಡೋದು ಇಲ್ಲ ಅಂತ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಆಪ್ತ ಗೆಳೆಯ ಮಾಜಿ ಮಂತ್ರಿ ಹೆಚ್‍ಸಿ ಮಹದೇವಪ್ಪ ಮಾತ್ರ, ನಿನ್ನೆ ಸಿದ್ದರಾಮಯ್ಯ ಜೊತೆ ಚರ್ಚೆ ಆಗಿರೋದು ನಿಜ. ಇದು ಅಹಿಂದ ಮಾದರಿ ಹೋರಾಟ ಅಂತಾ ಇಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಹಕ್ಕುಗಳಿಗೆ ಅನ್ಯಾಯವಾದರೆ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ನಮ್ಮ ಹೋರಾಟಗಳನ್ನು ಹಿಂದಿನ ರೀತಿಯ ಅಹಿಂದ ಹೋರಾಟ ಎಂದು ಕರೆಯಬೇಕಿಲ್ಲ. ಕಾಂಗ್ರೆಸ್ ಅನ್ನೋದೇ ಒಂದು ಚಳವಳಿ. ನಾವಿಬ್ಬರು ಪ್ರತ್ಯೇಕವಾಗಿ ಹೋರಾಟವೇನೂ ರೂಪಿಸುವ ಅಗತ್ಯವಿಲ್ಲ ಎಂದು ಮಹದೇವಪ್ಪ ಹೇಳಿದರು.
ಕಾಂಗ್ರೆಸ್ ಥಿಂಕ್ ಟ್ಯಾಂಕ್ ವಾದ ಏನು?
ಜಾತಿ ಸಮಾವೇಶಗಳು ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದಿಲ್ಲ. ಜಾತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡ್ರೂ, ಹಿಂದ ವರ್ಗದ ಹೆಚ್ಚು ಮತ ಸಿಕ್ಕಿಲ್ಲ. ಕಾಂಗ್ರೆಸ್‍ಗೆ ಸಣ್ಣ ಸಮುದಾಯಗಳ ಬೆಂಬಲ ಸಿಕ್ಕಿದೆ. ಆದರೆ ಹೆಚ್ಚು ಮತಗಳಿರುವ ಸಮುದಾಯಗಳನ್ನ ಸೆಳೆಯುವಲ್ಲಿ ವಿಫಲವಾಗಿತ್ತು. ಅಹಿಂದ ಸಮಾವೇಶಗಳಿಂದ ಮೇಲ್ವರ್ಗ ಮತ್ತಷ್ಟು ದೂರವಾಗುವ ಆತಂಕ ಕಾಂಗ್ರೆಸ್ ಕೆಲ ನಾಯಕರಿಗೆ ಎದುರಾಗಿದೆ ಎನ್ನಲಾಗ್ತಿದೆ.
ಅಹಿಂದ ಹೋರಾಟ ಒಕ್ಕಲಿಗರ ಮತ ಸೆಳೆಯುವ ಡಿಕೆಶಿ ತಂತ್ರಕ್ಕೆ ಹಿನ್ನೆಡೆ ಆಗಬಹುದು. ಸಿಎಂ ಯಡಿಯೂರಪ್ಪ, ಮಾಜಿ ಪಿಎಂ ದೇವೇಗೌಡರು ನಿವೃತ್ತಿ ಅಂಚಿನಲ್ಲಿದ್ದು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಸೆಳೆಯಲು ಇದು ಸಕಾಲ. ಜಾತಿ ಸಮಾವೇಶಗಳಿಗಿಂತ ಸಾರ್ವತ್ರಿಕ ಸಮಾವೇಶಗಳತ್ತ ಚಿತ್ತ ಹರಿಸಬೇಕು. ರೈತ, ಕಾರ್ಮಿಕ ಸಮಾವೇಶಗಳನ್ನು ಹೆಚ್ಚು ಹೆಚ್ಚು ನಡೆಸಬೇಕು. ವಿಷಯಾಧಾರಿತ ಹೋರಾಟಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ ಎಂದು ಒಂದು ವರ್ಗದ ಕೈ ನಾಯಕರು ವಾದ ಮಂಡಿಸುತ್ತಿದ್ದಾರೆ.
ಬಿಜೆಪಿ ವ್ಯಂಗ್ಯ: ಸಿದ್ದರಾಮಯ್ಯ ಬಣದ ‘ಹಿಂದ’ ಪಾಲಿಟಿಕ್ಸ್ ಗೆ ಬಿಜೆಪಿ ವ್ಯಂಗ್ಯವಾಡಿದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಉನ್ನತ ಸ್ಥಾನಮಾನ ತಪ್ಪಿಸಿದವರು ಸಿದ್ದರಾಮಯ್ಯ. 2013ರಲ್ಲಿ ದಲಿತ ಪರಮೇಶ್ವರ್ ಸೋಲಿಸಿ, ಸಿಎಂ ಗಾದಿ ತಪ್ಪಿಸಿದವರು ಸಿದ್ದರಾಮಯ್ಯ. ಆದ್ರೇ ಈಗ ಅವರೇ ಹಿಂದ ನಾಟಕ ಮಾಡಲು ಸಜ್ಜಾಗಿದ್ದಾರೆ. ಇದು ಬಹಳ ಚನ್ನಾಗಿದೆ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ.
ಸಚಿವ ರಮೇಶ್ ಜಾರಕಿಹೊಳಿ ಮಾತಾಡಿ, ಈಗ ಜಾತಿ, ಹಿಂದ ಏನೂ ಇಲ್ಲ. ಈಗೇನಿದ್ರೂ ಹಿಂದುತ್ವ ಮಾತ್ರ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ರು. ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ ಹೊಸ ಯೋಚನೆ ಮಾಡ್ತಿದ್ದಾರೆ. ಅವರು ಅಹಿಂದ ಸಂಘಟನೆ ಮಾಡಲಿ ಅಂತಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ.