ಚಿಕ್ಕಬಳ್ಳಾಪುರ: ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೋರ್ವ ನೀರಿನ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮದಲ್ಲಿ ನಡೆದಿದೆ.
ದಪ್ಪರ್ತಿ ಗ್ರಾಮದ 39 ವರ್ಷದ ನರಸಿಂಹಪ್ಪ ಮೃತ ದುರ್ದೈವಿಯಾಗಿದ್ದು, ನರಸಿಂಹಪ್ಪ ಸಂಜೆ ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಮೀನಿನ ಬಲೆ ಮತ್ತು ಬಟ್ಟೆಗಳನ್ನು ದಪ್ಪರ್ತಿ ಗ್ರಾಮದ ಒಡ್ಡಿನ ದಡದಲ್ಲಿಟ್ಟು ನೀರಿಗೆ ಹಾರಿದ್ದು, ಹೊಂಡದಲ್ಲಿದ್ದ ಹೂಳಿನಲ್ಲಿ ಸಿಲುಕಿ ಈಜಲಾಗದೇ ಮೃತಪಟ್ಟಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ನರಸಿಂಹಪ್ಪ ಸಾವಿನ ಹಿಂದೆ ಹಲವು ಅನುಮಾನಗಳಿವೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಸ್ಥಳಕ್ಕೆ ಗುಡಿಬಂಡೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.