– ಜೀವಂತ ಇರುವಾಗಲೇ ಪೋಸ್ಟ್ ಮಾರ್ಟಮ್‍ಗೆ ಸಿದ್ಧತೆ
ಬಾಗಲಕೋಟೆ: ಶವಾಗಾರ ತಲುಪಿ ಪವಾಡ ಸದೃಶ ರೀತಿಯಲ್ಲಿ ಯುವಕನೋರ್ವ ಸಾವಿನ ಮನೆಯ ಬಾಗಿಲು ತಟ್ಟಿ ವಾಪಸ್ ಬಂದಿರುವ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಲಿಂಗಪುರದಲ್ಲಿ ನಡೆದಿದೆ.
ಮಹಾಲಿಂಗಪುರದ ನಿವಾಸಿ ಶಂಕರ್ ಗೊಂಬಿ (27) ಎಂಬ ಯುವಕನೇ ಮರಣೋತ್ತರ ಪರೀಕ್ಷೆ ನಡೆಸುವ ಕೋಣೆ ತಲುಪಿ ಜೀವಂತವಾಗಿದ್ದೇನೆಂದು ವಾಪಸ್ ಬಂದಿದ್ದಾನೆ.
ಕಳೆದ ಫೆಬ್ರವರಿ 27 ರಂದು ರಸ್ತೆ ದಾಟುವಾಗ ಮಹಲಿಂಗಪುರ ಪಟ್ಟಣದ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆದು ಶಂಕರ್ ತಲೆಗೆ ತೀವ್ರವಾಗಿ ಗಾಯಗಳಾಗಿತ್ತು. ಹೀಗಾಗಿ ಶಂಕರ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದುಕುವ ಸಾಧ್ಯತೆ ಕಡಿಮೆ ಇದ್ದು, ವೆಂಟಿಲೇಟರ್ ಅಳವಡಿಸಿ ಅಂಬುಲೆನ್ಸ್ ಮೂಲಕ ವೈದ್ಯರು ಶಂಕರ್ ನನ್ನ ವಾಪಸ್ ಮನೆಗೆ ಕಳುಹಿಸಿದ್ದರು. ಅಂಬುಲೆನ್ಸ್ ನಲ್ಲಿ ಮಾರ್ಗಮಧ್ಯೆ ತೀರಿ ಹೋಗಿದ್ದಾನೆಂದು ಸುದ್ದಿ ಹರಡಿಬಿಟ್ಟಿತ್ತು. ಹೀಗಾಗಿ ಶಾಂಕರ್ ನನ್ನು ಮಹಲಿಂಗಪುರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ಕೋಣೆಯಲ್ಲಿ ಕೈ ಕಾಲು ಅಲುಗಾಡಲು ಶುರುಮಾಡಿವೆ. ವಿಷಯ ತಿಳಿದು ಹಿರಿಯ ವೈದ್ಯರು ಬಂದು ತಪಾಸಣೆ ಮಾಡಿದಾಗ, ಶಂಕರ್ ಬದುಕಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇಷ್ಟೆಲ್ಲ ಘಟನೆ ನಡೆಯುವ ವೇಳೆಗೆ ಶಂಕರ್ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಮಿಸ್ ಯೂ, ಮರಳಿ ಬಾ ಅಂತ ಶೃದ್ಧಾಂಜಲಿ ಪೋಸ್ಟ್ ಹಾಕುವ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.
ಮರಳಿ ಬಾರದೂರಿಗೆ ಪಯಣ ಎಂದು ಶೋಕ ಗೀತೆ ಮೂಲಕವೂ ಶಂಕರ್ ಗೆ ಶೃದ್ಧಾಂಜಲಿಯನ್ನ ಸಲ್ಲಿಸಿದ್ದರು. ಸದ್ಯ ಮತ್ತೆ ಸ್ನೇಹಿತ ಬದುಕಿರೋ ಸುದ್ದಿ ತಿಳಿದು ಕುಟುಂಬಸ್ಥರು ಹಾಗೂ ಸ್ನೇಹಿತರ ಬಳಗದಲ್ಲಿ ಸಮಾಧಾನ ಮೂಡಿದೆ. ಈಗ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ಶೃದ್ಧಾಂಜಲಿ ಪೋಸ್ಟ್ ತೆಗೆದಿದ್ದು ಸ್ನೇಹಿತ ಬದುಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಶಂಕರ್ ಬದಿಕಿರುವಾಗಲೇ ಮೃತನಾಗಿದ್ದಾನೆಂದು ಆತನ ಸ್ನೇಹಿತರು ಶೋಕ ಶ್ರದ್ಧಾಂಜಲಿ ಮಾಡಿದ್ರೆ, ಇತ್ತ ಮರಣೋತ್ತರ ಪರೀಕ್ಷೆ ವೇಳೆ ಬದುಕುಳಿದಿರೋದು ಬೆಳಕಿಗೆ ಬಂದಿದೆ. ಶಂಕರ್ ಬದುಕಿರುವಾಗಲೇ ಸಾವಿನ ಬಾಗಿಲು ತಲುಪಿ ಬಂದಂತಾಗಿದೆ.