ಬೆಂಗಳೂರು: ಬೇಕಾದ ಮಾತ್ರೆಯನ್ನು ಬಿಟ್ಟು ತಪ್ಪಾಗಿ ನಿದ್ದೆ ಮಾತ್ರೆಯನ್ನು ಸೇವಿಸಿದ್ದರಿಂದ ನಾನು ಆಸ್ಪತ್ರೆಗೆ ಸೇರುವಂತಾಯಿತು ಎಂದು ಸಿಎಂ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್‌ಆರ್ ಸಂತೋಷ್ ಹೇಳಿದ್ದಾರೆ.
ರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.ಊಟ ಸೇವಿಸಿದ ಬಳಿಕ ಅಜೀರ್ಣವಾಗಿತ್ತು. ಹೀಗಾಗಿ ನಾನು ತೆಗೆದುಕೊಳ್ಳಬೇಕಾದ ಮಾತ್ರೆಯನ್ನು ಬಿಟ್ಟು ನಿದ್ದೆ ಮಾತ್ರೆ ತೆಗೆದುಕೊಂಡಿದ್ದೆ. ಇದರಿಂದಾಗಿ ನನ್ನ ಆರೋಗ್ಯ ಹಾಳಾಗಿದ್ದನ್ನು ಕಂಡು ಪತ್ನಿ ಗಾಬರಿ ಬಿದ್ದು ಆಸ್ಪತ್ರೆಗೆ ಸೇರಿಸಿದ್ದಾಳೆ ಅಷ್ಟೇ. ಬೇರೆ ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ನಿದ್ದೆ ಮಾತ್ರೆಯನ್ನೇ ಯಾಕೆ ತೆಗೆದುಕೊಂಡದ್ದು ಎಂಬ ಪ್ರಶ್ನೆಗೆ, ಹಿಂದಿನಿಂದಲೂ ನಿದ್ದೆ ಬಾರದೇ ಇದ್ದ ಸಂದರ್ಭದಲ್ಲಿ ನಿದ್ದೆ ಮಾತ್ರೆಯನ್ನು ಸೇವಿಸುವ ಅಭ್ಯಾಸ ನನಗಿದೆ. ಈ ವೇಳೆ ನಿದ್ದೆ ಮಾತ್ರೆಯ ಅರ್ಧ ಭಾಗವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆ. ಇದರಲ್ಲಿ ಕಡಿಮೆ ಡೋಸ್ ಇರುತ್ತದೆ. ಮೊನ್ನೆ ನನ್ನ ತಪ್ಪಿನಿಂದ ಪೂರ್ಣವಾಗಿ ನಿದ್ದೆ ಮಾತ್ರೆ ಸೇವಿಸಿದ್ದೆ. ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು ಎಂದು ಉತ್ತರಿಸಿದರು.
ರಾಮಯ್ಯ ಆಸ್ಪತ್ರೆಯ ವೈದ್ಯ ಡಾ. ನರೇಶ್ ಶೆಟ್ಟಿ ಪ್ರತಿಕ್ರಿಯಿಸಿ, ಹೆಚ್ಚು ಜನರು ಒಟ್ಟಿಗೆ ಇರುವುದು ಒಳ್ಳೆಯದು ಅಲ್ಲ. ಕೌನ್ಸಿಲಿಂಗ್ ಮಾಡಿಸಿಕೊಳ್ಳುವುದಕ್ಕೆ ಸಲಹೆ ಕೊಟ್ಟಿದ್ದೇವೆ. ಸಂತೋಷ್ ಅವರು ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಮುಂದಿನ ಹಂತದಲ್ಲಿ ಹೇಳಿಕೆ ಕೊಡಬಹುದು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ರೆಸ್ಟ್‌ಗಾಗಿ ಆಸ್ಪತ್ರೆ ಸೇರಿಕೊಳ್ಳಲಿ: ಡಿಕೆಶಿಗೆ ಸಂತೋಷ್ ಟಾಂಗ್
ಶುಕ್ರವಾರ ರಾತ್ರಿ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರೆ ಸೇರಿದ್ದ ಸಂತೋಷ್ ಅವರನ್ನು ಶನಿವಾರ ರಾತ್ರಿ ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಐಪಿಸಿ ಸೆಕ್ಷನ್ 309(ಆತ್ಮಹತ್ಯೆಗೆ ಯತ್ನ) ಅಡಿ ಎಫ್‍ಐಆರ್ ದಾಖಲಾಗಿತ್ತು. ಹೀಗಾಗಿ ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದು ಎಂದು ಸಂತೋಷ್ ಹೇಳಿಕೆ ನೀಡಬೇಕಿದೆ.