ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಯುಕ್ತರ ನಡುವಿನ ಜಟಾಪಟಿ ಬಿಡಿಎ ಹುಳುಕುಗಳನ್ನು ಬಯಲು ಮಾಡಿದೆ.
ಬಿಡಿಎಯಲ್ಲಿ ಮಿಡ್ ನೈಟ್ ಡೀಲ್ ನಡೆಯುತ್ತಿವೆ. ಎರಡು ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಸ್ವತಃ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆರೋಪಿಸಿದ್ದಾರೆ. ನನಗೆ ಆಯುಕ್ತ ಮಹಾದೇವ್ ಸಹಕರಿಸುತ್ತಿಲ್ಲ, ಗೌರವ ನೀಡುತ್ತಿಲ್ಲ. ಒಂದು ಕಡತ ನೋಡೋಕು ಬಿಡಲ್ಲ. ಏನೊಂದು ಮಾಹಿತಿ ನೀಡಲ್ಲ. ತಮ್ಮ ಪಾಡಿಗೆ ತಾವು ತೀರ್ಮಾನ ತಗೋತಿದ್ದಾರೆ ಎಂದು ಎಸ್‍ಆರ್ ವಿಶ್ವನಾಥ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಾನು ಬೇಡ ಅಂದ್ರೂ ಕೂಡ ಭವಾನಿ ಸೊಸೈಟಿಗೆ 5 ಎಕರೆ ಭೂಮಿಯನ್ನು ಈಗಿನ ಬೆಲೆಯಲ್ಲಿ ನೀಡಲು ಆಯುಕ್ತರು ನಿರ್ಧರಿಸಿದ್ದಾರೆ. ನಿನ್ನೆ ರಾತ್ರಿ 10.45ರವರೆಗೂ ಬಿಡಿಎಯಲ್ಲಿ ಅಧಿಕಾರಿಗಳನ್ನು ಕೂರಿಸಿಕೊಂಡು ಈ ನಿರ್ಧಾರ ಮಾಡಿದ್ದಾರೆ. ಇದರಿಂದ ಬಿಡಿಎಗೆ 500 ಕೋಟಿ ಲಾಸ್ ಆಗಿದೆ ಎಂದು ಎಸ್‍ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ. ಈ ಹಿಂದೆ ಭವಾನಿಗೆ ಸೊಸೈಟಿಗೆ ಅಕ್ರಮವಾಗಿ ಜಮೀನು ಹಂಚಿಕೆಯಾದಾಗ ಎಸ್‍ಟಿ ಸೋಮಶೇಖರ್ ಅಧ್ಯಕ್ಷರಾಗಿದ್ರು. ಈ ಬಗ್ಗೆ ಸಿಎಂ ಜೊತೆ ಚರ್ಚಿಸ್ತೀನಿ ಅಂತಲೂ ವಿಶ್ವನಾಥ್ ಹೇಳಿದರು.
ಬಿಡಿಎ ಉಪಕಾರ್ಯದರ್ಶಿ ಚಿದಾನಂದ್ ತಮ್ಮ ಸಂಬಂಧಿಕರಿಗೆ ಸೈಟು ಹಂಚಿಕೆ ಮಾಡಿದ್ದಾರೆ. ಕಾರ್ನರ್ ಸೈಟು, ಬಲ್ಕ್ ಅಲಾಟ್‍ಮೆಂಟ್, ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ. ಈ ರೀತಿಯಲ್ಲಿ 2ಸಾವಿರ ಕೋಟಿ ಮೊತ್ತದ ಹಗರಣ ನಡೀತಿದೆ ಎಂದು ಆರೋಪ ಮಾಡಿದರು. ಅಂತಿಮವಾಗಿ ಏನ್ ಮಾಡಬೇಕು ಅನ್ನೋದು ಗೊತ್ತು ಎನ್ನುವ ಮೂಲಕ ಪರೋಕ್ಷ ಎಚ್ಚರಿಕೆ ನೀಡಿದರು.
ಈ ಬೆನ್ನಲ್ಲೇ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಬಿಡಿಎ ಆಯುಕ್ತ ಮಹಾದೇವ್, ನಾನು ಅಧ್ಯಕ್ಷರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಆರು ತಿಂಗಳಲ್ಲಿ ಒಂದು ಸಾವಿರ ಕೋಟಿ ಉಳಿಸಿದ್ದೀನಿ ಎಂದು ತಿರುಗೇಟು ನೀಡಿದರು. ಎಲ್ಲವನ್ನು ಅಧ್ಯಕ್ಷರ ಗಮನಕ್ಕೆ ತರುವ ಅಗತ್ಯವಿಲ್ಲ. ಸಿಎಂಗೆ ದೂರು ಕೊಟ್ರೇ ನಾನು ನೋಡಿಕೊಳ್ಳುತ್ತೇನೆ. ಭವಾನಿ ಸೊಸೈಟಿಗೆ ಸಗಟು ಹಂಚಿಕೆ ಮಾಡಿಲ್ಲ. ಇದು ಪರ್ಯಾಯ ಜಾಗ. ನನಗೆ ಬೆದರಿಕೆ ಕರೆ ಬಂದಿದೆ. ಆದರೆ ಅವರ ಹೆಸರನ್ನು ಹೇಳಲ್ಲ ಎಂದ ಮಹಾದೇವ್, ಬಲ್ಕ್ ಅಲಾಟ್‍ಮೆಂಟ್ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.