ಬೆಂಗಳೂರು: ನೇರಳೆ ಮಾರ್ಗದಲ್ಲಿ ಕಾಮಗಾರಿ ನಡೆಯಲಿರುವ ಕಾರಣ 8 ದಿನಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆ ನಡುವೆ ಮಾರ್ಚ್ 21 ರಿಂದ 28ರವರೆಗೆ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ನಮ್ಮ ಮೆಟ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹೇಳಿಕೆಯಲ್ಲಿ ಏನಿದೆ?
ಮೈಸೂರು ರಸ್ತೆಯಿಂದ ಕೆಂಗೇರಿಯವರೆಗಿನ ಪೂರ್ವ ಪಶ್ಚಿಮ ವಿಸ್ತರಿಸಿದ ನೇರಳೆ ಮಾರ್ಗ ಪೂರ್ವ ನಿಯೋಜನೆಗೆ ಸಂಬಂಧಿಸಿದಂತೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.
ಕೆಂಪೇಗೌಡ ನಿಲ್ದಾಣ ಮತ್ತು ಮೈಸೂರು ರಸ್ತೆ ನಡುವೆ ಮೆಟ್ರೋ ರೈಲು ಸೇವೆಗಳನ್ನು ಮಾರ್ಚ್ 21 ರಿಂದ ಮಾರ್ಚ್ 28ರವರೆಗೆ ಸ್ಥಗಿತಗೊಳಿಸಲಾಗುವುದು.
ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿರುವ ಮೆಟ್ರೋ ಸೇವೆಗಳು ಬೈಯಪ್ಪನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ವರೆಗೆ ಮಾತ್ರ ಇರಲಿದೆ. ಮಾರ್ಚ್ 29 ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸೇವೆಗಳು ಎಂದಿನಂತೆ ನೇರಳೆ ಮಾರ್ಗದಲ್ಲಿ ಆರಂಭಗೊಳ್ಳಲಿದೆ.
ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳಲ್ಲಿ ಈ ದಿನಾಂಕದಂದು ಯಾವುದೇ ಬದಲಾವಣೆ ಇರುವುದಿಲ್ಲ.