ಬೆಂಗಳೂರು: ಅಂತಾರಾಷ್ಟ್ರೀಯ ತಾಯ್ನುಡಿ ದಿನ- 2021ರ ಸಂದರ್ಭಕ್ಕೆ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಶನಿವಾರದಂದು ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗಾಗಿ ‘ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ ಕಾರ್ಯಾಗಾರವನ್ನು ನಡೆಯಲಿದೆ. ತಂತ್ರಜ್ಞಾನ ಜಗತ್ತನ್ನು ಕುರಿತು ಲೇಖಕ ಟಿ. ಜಿ. ಶ್ರೀನಿಧಿ ಬರೆದಿರುವ ‘ಬೆರಳ ತುದಿಯ ಬೆರಗು’ ಕೃತಿ ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಗಲಿದೆ.
ಸುರಾನಾ ಕಾಲೇಜಿನ ಕನ್ನಡ ವಿಭಾಗವು ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಕುರಿತ ಕಾರ್ಯಾಗಾರಗಳನ್ನು ಹಲವು ವರ್ಷಗಳಿಂದ ಆಯೋಜಿಸುತ್ತಿದ್ದು, ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಸಂಸ್ಥೆಯ ಟಿ. ಜಿ. ಶ್ರೀನಿಧಿ ಹಾಗೂ ಅಭಿಷೇಕ್ ಜಿ. ಎಸ್. ಅವರು ನಡೆಸಿಕೊಡಲಿರುವ ಈ ಕಾರ್ಯಾಗಾರವು ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಗಳು, ಕನ್ನಡ ತಂತ್ರಾಂಶಗಳು, ಕನ್ನಡದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳು ಸೇರಿದಂತೆ ಹಲವು ವಿಷಯಗಳ ಸ್ಥೂಲ ಪರಿಚಯ ಮಾಡಿಕೊಡಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುರಾನಾ ವಿದ್ಯಾಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟೀ ಡಾ. ಅರ್ಚನಾ ಸುರಾನಾ, ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್, ಇಜ್ಞಾನ ಟ್ರಸ್ಟ್‌ನ ಟಿ. ಜಿ. ಶ್ರೀನಿಧಿ ಉಪಸ್ಥಿತರಿರಲಿದ್ದಾರೆ. ಲೋಕಾರ್ಪಣೆಯಾಗುತ್ತಿರುವ ‘ಬೆರಳ ತುದಿಯ ಬೆರಗು’ ಕೃತಿಯನ್ನು ವಿಕಾಸ ಪ್ರಕಾಶನ ಪ್ರಕಟಿಸಿದೆ.