ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾ ವೈರಸ್ ತಮ್ಮೂರಿಗೆ ಬಾರದಿರಲಿ ಎಂದು ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿ ಕಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದಾರ್ಲಹಳ್ಳಿಯ ಗ್ರಾಮಸ್ಥರು ಬೇವಿನ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೊರೊನಾ ವೈರಸ್ ಕಾಟಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ನಮ್ಮಲ್ಲೂ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ನಗರಗಳಿಂದ ಹಳ್ಳಿಗಳತ್ತ ಕೊರೊನಾ ಮಾರಿ ಕಾಣಿಸಿಕೊಳ್ತಿದೆ. ಹಾಗಾಗಿ ಕೆಲ ಗ್ರಾಮಗಳು ಕಟ್ಟುನಿಟ್ಟಾಗಿ ಸರ್ಕಾರದ ಆದೇಶಗಳನ್ನು ಪಾಲಿಸುವುದರ ಜೊತೆಗೆ ಪೂಜೆಗಳಲ್ಲಿ ತೊಡಗಿಕೊಂಡಿದ್ದಾರೆ. ಬಂದಾರ್ಲಹಳ್ಳಿಯ ಗ್ರಾಮಸ್ಥರು ಸಹ ಒಂದಾಗಿ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ, ತಮ್ಮೂರಿಗೆ ಡೆಡ್ಲಿ ವೈರಸ್ ಬರದಿರಲಿ ಎಂದು ಪ್ರಾರ್ಥಿಸಿದ್ದಾರೆ.
ಮನೆಯಿಂದ ಪ್ರತಿಯೊಬ್ಬರು ಹೋಳಿಗೆ, ಮೊಸರನ್ನ ಅರಿಶಿನ-ಕುಂಕುಮ ದೀಪವನ್ನ ತಂದು ಪೂರ್ವ ದಿಕ್ಕಿನ ಬೇವಿನ ಮರದ ಸುತ್ತಲೂ ಪೂಜೆ ಸಲ್ಲಿಸಿ ಎಡೆ ಹಾಕಿದ್ದಾರೆ. ಹಿಂದಿನ ಕಾಲದಿಂದಲೂ ಸಾಂಕ್ರಾಮಿಕ ರೋಗಗಳು ಬಂದಾಗ ಈ ರೀತಿ ಪೂಜೆ ಮಾಡಿಕೊಂಡು ಬರಲಾಗುತ್ತಿದ್ದು, ಈ ರೀತಿ ಮಾಡಿದರೆ ನಮ್ಮ ಗ್ರಾಮಕ್ಕೆ ಯಾವುದೇ ರೋಗ ಬರುವುದಿಲ್ಲ ಎಂಬ ನಂಬಿಕೆ ಇದೆ ಎಂದು ಬಂದಾರ್ಲಹಳ್ಳಿಯ ಗ್ರಾಮಸ್ಥರು ಹೇಳುತ್ತಾರೆ.