ಧಾರವಾಡ: ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನೇ ಮರೆತು ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಧಾರವಾಡಕ್ಕೆ ಇಂದು ಭೇಟಿ ನೀಡಿದ್ದರು. ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಲು ಧಾರವಾಡದ ನರೇಂದ್ರ ಬೈಪಾಸ್ ಬಳಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ಅಲ್ಲದೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನೇ ಮರೆತು ಅಭೂತಪೂರ್ವವಾಗಿ ಸ್ವಾಗತ ಕೋರಿದ್ದಾರೆ.
ಧಾರವಾಡ ಕೃಷಿ ವಿವಿ ಎದುರು ನಡೆದ ಸ್ವಾಗತದ ವೇಳೆ ಡಿಕೆಶಿ ಮುಂದೆ ಕೈ ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡಿದ್ದರೆ. ಯೋಗೀಶ್ ಗೌಡ ಹತ್ಯೆ ಸಿಬಿಐ ತನಿಖೆ ವಿಚಾರ ಹಾಗೂ ತನಿಖೆಯಲ್ಲಿ ನಡೆದಿರುವ ಅನೇಕ ಕೈ ಮುಖಡರು, ಕಾರ್ಯಕರ್ತರ ವಿಚಾರಣೆ ಕುರಿತು ಸಿಬಿಐ ತೊಂದರೆ ನಿವಾರಿಸುವಂತೆ ಕಾರ್ಯಕರ್ತರು ಡಿಕೆಶಿ ಮುಂದೆ ಅಳಲುತೋಡಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉಪಚುನಾವಣೆ ಮತ್ತು ಎಂಎಲ್‍ಸಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಉಪಚುನಾವಣೆ ಅಭ್ಯರ್ಥಿಗಳು ಫೈನಲ್ ಆಗಬೇಕಿದೆ. ಪದವೀಧರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ಫೈನಲ್ ಆಗಿದೆ. ನೀವೆಲ್ಲ ಮಾಧ್ಯಮಗಳು ಯಾವ ರೀತಿ ಮಾಡು ಅಂತಿರೀ ಹಾಗೆಯೇ ಚುನಾವಣೆ ಮಾಡ್ತೀವಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅವರು ಚುನಾವಣೆ ಜೋರಾಗಿ ಮಾಡುತ್ತಾರೆ. ನಾವು ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ಡ್ಯುಟಿ ನಾವು ಮಾಡುತ್ತೇವೆ ಎಂದರು.
ಇದೇ ವೇಳೆ ಡಿ.ಕೆ. ರವಿ ಪತ್ನಿಗೆ ಟಿಕೆಟ್ ವಿಚಾರ ಸಂಬಂಧ ಆರ್.ಆರ್ ನಗರದ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿಯವರಿಗೆ ವಹಿಸಿದ್ದೇವೆ. ಅವರೇ ನೋಡಿ ತೀರ್ಮಾನಿಸಿ ನಮಗೆ ಹೇಳುತ್ತಾರೆ. ಸರ್ಕಾರಕ್ಕೆ ಕಣ್ಣು, ಕವಿ, ಹೃದಯವೂ ಇಲ್ಲ. ಹೀಗೆ ನಾ ಹಿಂದೆಯೇ ಹೇಳಿದ್ದೆ. ಕಳೆದ ಪ್ರವಾಹದ ಸಂತ್ರಸ್ತರಿಗೆ ಇನ್ನೂ ಸರಿಯಾಗಿ ಪರಿಹಾರ ಆಗಿಲ್ಲ. ಅವರ ನೋವು ಯಡಿಯೂರಪ್ಪ ಬಂದು ಭೇಟಿ ಮಾಡಿ ನೋಡಬೇಕು. ಸುಮ್ಮನೆ ಅಲ್ಲೆಲ್ಲೋ ಕುಳಿತು ಮಾತನಾಡಿದ್ರೆ ಆಗುತ್ತಾ ಎಂದು ಪ್ರಶ್ನಿಸಿದರು.