ಮುಂಬೈ: ದೇಶದಲ್ಲಿ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ತನ್ನ ಎರಡನೆ ಅಲೆ ಆರಂಭಿಸಿದೆ. ಕಳೆದ ವರ್ಷ ಕೊರೊನಾ ಆರ್ಭಟಕ್ಕೆ ನಲುಗಿದ ಭಾರತ, ವ್ಯಾಕ್ಸಿನ್ ಬಂದ ನಂತರ ಕೊಂಚ ಸುಧಾರಿಸಿಕೊಂಡಿದೆ. ಆದರೂ ಬೆನ್ನುಬಿಡದ ಕೊರೊನಾ ಮಹಾಮಾರಿ ಇದೀಗ ಪುನಃ ರುದ್ರತಾಂಡವಾಡಲು ಶುರುಮಾಡುತ್ತಿದೆ. ಈ ಮಧ್ಯೆ ಜನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಯಾ ಸರ್ಕಾರಗಳು ಎಚ್ಚರಿಕೆ ನೀಡುತ್ತಿವೆ.
ಆದರೆ ಇತ್ತೀಚೆಗೆ ಮಹಿಳೆಯೊಬ್ಬಳು ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಹೊರಗೆ ಬಂದಿದ್ದಾಳೆ. ಇದನ್ನು ಗಮನಿಸಿದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕಾರ್ಮಿಕರೊಬ್ಬರು ಮಹಿಳೆಯನ್ನು ತಡೆದಿದ್ದಾರೆ. ಈ ವೇಳೆ ಮಹಿಳೆ ನಾಗರಿಕ ಸಂಸ್ಥೆಯ ಕಾರ್ಮಿಕರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೀಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.
View this post on Instagram
ವೀಡಿಯೋದಲ್ಲಿ ಆಟೋದಲ್ಲಿ ಕುಳಿತಿದ್ದ ಮಹಿಳೆಗೆ ಮಾಸ್ಕ್ ಧರಿಸುವಂತೆ ನಾಗರಿಕ ಸಂಸ್ಥೆಯ ಕಾರ್ಮಿಕ ಮಹಿಳೆ ತಿಳಿಸುತ್ತಾಳೆ. ಈ ವೇಳೆ ಆಟೋದಿಂದ ಕೆಳಗೆ ಇಳಿದ ಮಹಿಳೆ, ನಡು ಬೀದಿಯಲ್ಲಿ ಕಾರ್ಮಿಕ ಮಹಿಳೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ. ಆದರೂ ಬಿಎಂಸಿ ಕಾರ್ಮಿಕ ಮಹಿಳೆ, ಆಕೆಯನ್ನು ಅಲ್ಲಿಂದ ತೆರಳಲು ಬಿಡದೇ ಅಡ್ಡ ಹಾಕುತ್ತಾಳೆ. ಇದರಿಂದ ಮತ್ತಷ್ಟು ಕೋಪಗೊಂಡ ಮಹಿಳೆ ಕಾಲಿನಿಂದ ಆಕೆಗೆ ಮತ್ತಷ್ಟು ಒದೆಯುವುದನ್ನು ನಾವು ಕಾಣಬಹುದಾಗಿದೆ.