ಗದಗ: ಪೈಲ್ವಾನರು ಮಾಶಾಸನ ಬಿಡುಗಡೆ ಮಾಡುವಂತೆ ಸಚಿವ ಸಿ.ಸಿ.ಪಾಟೀಲ್ ಗೆ ಮನವಿ ನೀಡುವ ವೇಳೆ ಜಟಾಪಟಿ ನಡೆದಿದೆ. ಜಿಲ್ಲೆಯ ಅನೇಕ ಪೈಲ್ವಾನರು ಒಟ್ಟಾಗಿ ಸ್ಥಗಿತಗೊಂಡ ಮಸಾಶನ ನೀಡುವಂತೆ ಸಚಿವರಿಗೆ ಮನವಿ ನೀಡಲು ಮುಂದಾದರು. ಈ ವೇಳೆ ಸಚಿವರು ಯಾರನ್ನೂ ಹತ್ತಿರ ಬಿಟ್ಟುಕೊಳ್ಳದೆ ಅಂತರ ಕಾಯ್ದುಕೊಂಡರು.
ನಗರದಲ್ಲಿ ಇಂದು ಘಟನೆ ನಡೆದಿದ್ದು, ನಮ್ಮ ಸರ್ಕಾರ ಮಾಶಾಸನ ಹೆಚ್ಚಿಸಿದೆ. ಇನ್ನೂ ಏನುಬೇಕು ಎಂದು ಸಚಿವ ಸಿ.ಸಿ.ಪಾಟೀಲ್ ಪ್ರಶ್ನಿಸಿದರು. ನಿಮ್ಮ ಸರ್ಕಾರ ಏನೂ ಮಾಡಿಲ್ಲ. ಮೊದಲು ಕೊಡುತ್ತಿರುವುದನ್ನು ನಿಲ್ಲಿಸಿದೆ ಎಂದು ಸಚಿವರ ಮಾತಿಗೆ ಪೈಲ್ವಾನರು ತಿರುಗೇಟು ನೀಡಿದರು. ಇದರಿಂದ ಕೋಪಗೊಂಡ ಸಚಿವರು, ಪೈಲ್ವಾನರ ವಿರುದ್ಧ ಗರಂ ಆದರು. ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದೇ ಅಂತರ ಕಾಯ್ದುಕೊಂಡರು. ಮನವಿಗೆ ಸಚಿವರು ಸರಿಯಾಗಿ ಸ್ಪಂದಿಸದಕ್ಕೆ, ಬಿಜೆಪಿ ಸರ್ಕಾರದ ವಿರುದ್ಧ ಪೈಲ್ವಾನರು ಧಿಕ್ಕಾರ ಕೂಗಿದರು. ಸಚಿವರು, ಸಂಸದರ ಎದುರೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಅಲ್ಲೇ ಇದ್ದ ಸಂಸದ ಶಿವಕುಮಾರ್ ಉದಾಸಿ, ಪೈಲ್ವಾನರನ್ನು ಸಮಾಧಾನ ಪಡಿಸಲು ಮುಂದಾದರು. ಕೋವಿಡ್ ನಿಂದ ಎಲ್ಲ ಕಡೆ ತಡವಾಗಿದೆ ಕೊಡಿಸುತ್ತೇನೆ. ಈ ಬಗ್ಗೆ ಡಿಸಿ ಹಾಗೂ ಸಚಿವರ ಜೊತೆಗೆ ಮಾತನಾಡಿ, ಮಾಶಾಸನ ಕೊಡಿಸುತ್ತೇನೆ ಎಂದು ಸಂಸದ ಉದಾಸಿ ಬರವಸೆ ನೀಡಿದರು. ಆದರೆ ಸಚಿವರು ಇದಕ್ಕೆ ಉತ್ತರ ನೀಡಬೇಕು ಎಂದು ಪೈಲ್ವಾನರು ಪಟ್ಟುಹಿಡಿದು ಕೂತರು. ನಂತರ ಕೈ ಮುಗಿದು ವಿನಂತಿಕೊಳ್ಳುವ ಮೂಲಕ ಪೈಲ್ವಾನರ ಮನವೊಲಿಸಲು ಉದಾಸಿ ಮುಂದಾದರು.
ಕೊರೊನಾ ಕೈಮೀರುವ ಸಾಧ್ಯತೆ
ಕೊರೊನಾ 2ನೇ ಅಲೆ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ಸರ್ಕಾರದ ರೂಲ್ಸ್ ಪಾಲನೆ ಮಾಡಿ, ಸರ್ಕಾರದ ಜೊತೆ ಕೈಜೋಡಿಸಿ ಎಂದು ಸಚಿವ ಸಿ.ಸಿ.ಪಾಟೀಲ್ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು. ಭಯ ಪಡದೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ಮದುವೆ, ಶುಭ ಸಮಾರಂಭಗಳಲ್ಲಿ ಜನ ನಿಯಂತ್ರಣದ ಬಗ್ಗೆ ಕಠಿಣ ಕ್ರಮ ಜಾರಿಗೊಳಿಸಲಾಗಿದೆ. ಸದ್ಯ ಜಾತ್ರೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿ. ಜನರು ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ಕುಟುಂಬದ ಸುರಕ್ಷತೆ ಕಾಪಾಡಿಕೊಳ್ಳಿ, ಅಗತ್ಯವಿದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ ಎಂದು ಸಚಿವ ಸಿ.ಸಿ ಪಾಟೀಲ್ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.
ಜಿಲ್ಲೆಯಲ್ಲಿ ನಿತ್ಯ 18 ರಿಂದ 20 ಕೇಸ್ ಬರುತ್ತಿವೆ. ಇದು ಹೀಗೆ ಮುಂದುವರಿದರೆ ಕೈಮೀರುವ ಸಾಧ್ಯತೆ ಇದೆ. ಇದನ್ನು ಅರಿತು ಜನರು ಸುರಕ್ಷಿತವಾಗಿರಿ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಶಿವಕುಮಾರ್ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.