ಹೈದರಾಬಾದ್: ಮಾಲೀಕನನ್ನು ಕೊಂದ ಹುಂಜವನ್ನು ಪೊಲೀಸರು ಕಸ್ಟಡಿಗೆ ಪಡೆದು ಕೋರ್ಟ್‍ಗೆ ಹಾಜರು ಪಡಿಸಲಿರುವ ವಿಚಿತ್ರ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ತನುಗುಲ್ಲಾ ಸತೀಶ್ ಎಂದು ಗುರುತಿಸಲಾಗಿದೆ. ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ಎಲ್ಲಮ್ಮ ದೇವಾಲಯದ ಸಮೀಪ ಅಕ್ರಮವಾಗಿ ಹುಂಜಗಳ ಅಂಕವನ್ನು ನಡೆಸಲಾಗಿತ್ತು. ಈ ವೇಳೆ ನಡೆದ ಅವಘಡದಿಂದ ಸತೀಶ್ ಸಾವನ್ನಪ್ಪಿದ್ದನು.
ಹುಂಜ ಅಂಕದಲ್ಲಿ ಕಾದಾಡಿ ಆಯಾಸಗೊಂಡಿತ್ತು. ಈ ವೇಳೆ ಸತೀಶ್ ಹುಂಜವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಆಗ ಹುಂಜದ ಕಾಲಿಗೆ ಕಟ್ಟಿದ್ದ ಚೂರಿ ತೊಡೆಗೆ ತಾಕಿ ಸತೀಶ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದನು.
ಈ ಸಂಬಂಧ ಅಂಕವನ್ನು ಆಯೋಜನೆ ಮಾಡಿದ್ದ ಆಯೋಜಕನನ್ನು ವಶಕ್ಕೆ ಪಡೆದಿದ್ದೇವೆ. ಹುಂಜವನ್ನು ಹಗ್ಗದಿಂದ ಠಾಣೆಯಲ್ಲಿ ಕಟ್ಟಿ ಹಾಕಲಾಗಿದೆ. ಅದಕ್ಕೆ ಬೇಕಾದ ಆಹಾರವನ್ನು ನೀಡುತ್ತಿದ್ದೇವೆ. ಹುಂಜವನ್ನು ಕೋರ್ಟ್‍ಗೆ ಹಾಜರು ಪಡಿಸುತ್ತೇವೆ ನ್ಯಾಯಾಧೀಶರು ಹೇಳಿದಂತೆ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.