ಟರ್ಕಿ: ಮನೆ ಮಾಲೀಕ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಇತ್ತ ಆತ ಬೆಳೆಸಿದ ಪ್ರೀತಿಯ ನಾಯಿಯು ಆತನಿಗಾಗಿ 6 ದಿನಗಳ ಕಾಲ ಆಸ್ಪತ್ರೆಯ ಬಾಗಿಲಲ್ಲಿ ಕಾದು ತನ್ನ ನಿಯತ್ತನ್ನು ಮೆರೆದಿದೆ.
ಟರ್ಕಿಯ 68 ವರ್ಷ ಪ್ರಾಯದ ಸೆಮಲ್ ಸೆಂಟುರ್ಕ್ ಎಂಬವರು ತಮ್ಮ ಮನೆಯಲ್ಲಿ ಪ್ರೀತಿಯಿಂದ ಮಿಶ್ರತಳಿಯ ಸಣ್ಣ ನಾಯಿ ಮರಿ ಸಾಕಿ, ಅದಕ್ಕೆ ಬಾನ್ಕುಕ್ ಎಂದು ನಾಮಕರಣ ಮಾಡಿದ್ದರು. ಕೆಲ ದಿನಗಳ ಹಿಂದೆ ಸೆಮಲ್ ಅವರಿಗೆ ಮಿದುಳಿನ ಸಮಸ್ಯೆ ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತನ್ನ ನಿಯತ್ತನ್ನು ಪ್ರದರ್ಶಿಸಿದ ನಾಯಿ ಯಾರೆ ಓಡಿಸಿದರು ಅದು ಮಾಲೀಕನಿದ್ದ ಆಸ್ಪತ್ರೆಯ ಮುಂಬಾಗಿಲಿನಿಂದ ಕದಲದೆ ತನ್ನ ಯಜಮಾನನಿಗಾಗಿ ದಾರಿ ಕಾಯುತ್ತಿತ್ತು.
https://twitter.com/istanbulism/status/1351621599057891330
ಸೆಮಲ್ ಅವರಿಗೆ ಮಿದುಳಿನ ಸಮಸ್ಯೆಯಿಂದ ಕೋಮಾ ಸ್ಥಿತಿಗೆ ಹೋಗಿದ್ದರು. ಇದರಿಂದ ನಾಯಿ ತುಂಬಾ ನೊಂದುಕೊಂಡು ಆಸ್ಪತ್ರೆಯ ದ್ವಾರದ ಬಳಿ ನಿಂತು ಮಾಲೀಕನ ಬರುವಿಕೆಗಾಗಿ ಕಾಯುತ್ತಿದ್ದರೆ, ಇತ್ತ ಆಸ್ಪತ್ರೆಯ ಸಿಬ್ಬಂದಿ ಈ ನಾಯಿಯ ಪ್ರೀತಿಯನ್ನು ನೋಡಿ ಮೂಕವಿಸ್ಮಿತರಾಗಿದ್ದರು. ನಾಯಿಯು ಹಾಗೆ ಯಾರಿಗೂ ತೊಂದರೆ ಕೊಡದೇ ತನ್ನ ಪಾಡಿಗೆ ನಿಂತುಕೊಂಡು ಸಿಮಲ್‍ಗಾಗಿ ಕಾಯುತ್ತಿತ್ತು. ಒಂದು ವಾರಗಳ ಬಳಿಕ ಸಿಮಲ್ ಆಸ್ಪತ್ರೆಯಿಂದ ವೀಲ್ ಚಯರ್‍ನಲ್ಲಿ ಹೊರ ಬರುತ್ತಿದ್ದಂತೆ ಸಂತೋಷದಿಂದ ಸಿಮಲ್ ಬಳಿ ಬಂದು ಹಾರಿ ಕುಳಿತು ಸಂತೋಷ ವ್ಯಕ್ತಪಡಿಸಿತ್ತು. ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.