– 20 ಕೃಷ್ಣಮೃಗ ಚರ್ಮ, 2 ಕೊಂಬು ವಶಕ್ಕೆ, 6 ಮಂದಿ ಅರೆಸ್ಟ್
ಕೊಪ್ಪಳ: ಕೃಷ್ಣಮೃಗಳ ಬೇಟೆಯಾಡಿ ಚರ್ಮ, ಕೊಂಬುಗಳ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ನಿವಾಸಿಗಳಾದ ತುಗ್ಲೆಪ್ಪ, ಶರಣಪ್ಪ ಚೌಹಾಣ, ಮಲ್ಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗಪ್ಪ ಕಟ್ಟಿಮನಿ, ಹನುಮಂತ ಕಟ್ಟಿಮನಿ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಯಲಬುರ್ಗಾ ಭಾಗದ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಬಂಧಿತರಿಂದ 20 ಕೃಷ್ಣಮೃಗ ಚರ್ಮ, 2 ಕೃಷ್ಣಮೃಗ ಟ್ರೋಫಿಯುಳ್ಳ ಕೊಂಬು, ಒಂದು ಜಿಂಕೆ ಮರಿ ಸೇರಿದಂತೆ ದಂಧೆಗೆ ಬಳಸುತ್ತಿದ್ದ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗಿಳಿದು ಕೃಷ್ಣಮೃಗ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷ್ಣಮೃಗದ ಒಂದು ಚರ್ಮಕ್ಕೆ 50 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಭಾಗದಲ್ಲಿ ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿನಿಮಿಯ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಮಾರುವೇಶ ಧರಿಸಿಕೊಂಡು ಜಿಂಕೆ ಚರ್ಮ ಖರೀದಿಗೆ ಬಂದಿದ್ದೇವೆ ಎಂದು ಹೇಳಿ ಗ್ಯಾಂಗ್‍ನ್ನು ಸೆರೆಹಿಡಿದಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.