ಬೆಂಗಳೂರು: ಮಾರುವೇಷದಲ್ಲಿ ತೆರಳಿ ರಾಬರ್ಟ್ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕ್ಷಿಸಿದ್ದಾರೆ.
ರಾಬರ್ಟ್ ಸಿನಿಮಾ ಯಶಸ್ಸಿನ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದರ್ಶನ್, ಕಳೆದ ದಿನ ಮಾರುವೇಶದಲ್ಲಿ ಸಿನಿಮಾ ಮಂದಿರಕ್ಕೆ ತೆರಳಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಣೆ ಮಾಡಿದ್ದೆ. ಈ ವೇಳೆ ಅಭಿಮಾನಿಗಳ ಶಿಲ್ಲೆ ಚಪ್ಪಾಳೆಗಳನ್ನು ಗಮನಿಸಿದ್ದೇನೆ. ಮುಂದಿನ ಸಿನಿಮಾಗಳಲ್ಲಿ ಶಿಲ್ಲೆ ಚಪ್ಪಾಳೆಗಳ ಇನ್ನಷ್ಟೂ ದೃಶ್ಯಗಳನ್ನು ಅಳವಡಿಸಿಕೊಳ್ಳುತ್ತೇವೆ ಎಂದರು.
ಸಿನಿಮಾಗೆ ನನ್ನ ಒಬ್ಬನಿಂದ ಯಶಸ್ಸು ಸಿಕ್ಕಿದ್ದಲ್ಲ. ಇದು ಟೀಮ್ ವರ್ಕ್. ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಉತ್ತಮವಾಗಿ ನಟಿಸಿದ್ದಾರೆ. ಸಿನಿಮಾದ ಸ್ಪೆಷಲ್ ಎಲಿಮೆಂಟ್, ತೊದಲಿಕೊಂಡು ಮಾಡಿದ ಪಾತ್ರ ತುಂಬಾ ಖುಷಿಕೊಟ್ಟಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ.
ಈ ನಡುವೆ ಸಿನಿಮಾದ ಸಕ್ಸಸ್ ಮತ್ತು ಬಾಕ್ಸ್‍ಆಫೀಸ್ ಸುಲ್ತಾನ ಅಂತ ಹೆಸರು ಕೊಟ್ಟವರ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಜನ ಸಿನಿಮಾವನ್ನು ಖುಷಿ ಪಟ್ಟು ನೋಡುತ್ತಿದ್ದಾರೆ ಅದೇ ನಮಗೆ ಖುಷಿ. ಬಾಕ್ಸ್ ಆಫೀಸ್ ಸುಲ್ತಾನ ಎಂಬ ಬಿರುದನ್ನು ಮೊದಲ ಬಾರಿಗೆ ಪತ್ರಕರ್ತರಾದ ವಿಜಯ್ ಸಾರಥಿಯವರು ಬರೆದಿದ್ದರು. ಅವತ್ತಿನಿಂದ ಇಂದಿನ ವರೆಗೆ ಆ ಹೆಸರು ಜಾಲ್ತಿಯಲ್ಲಿದೆ. ಇಂದು ಅವರು ನಮ್ಮೊಂದಿಗಿಲ್ಲ ಆದರೆ ಹೃದಯದಲ್ಲಿ ಇದ್ದಾರೆ ಎಂದು ವಿಜಯ್ ಸಾರಥಿಯನ್ನು ನೆನಪಿಸಿಕೊಂಡರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು ಯಶಸ್ವಿಯಾಗಿ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ.