ನವದೆಹಲಿ: ಐಪಿಎಲ್‍ನಲ್ಲಿ ನಿರೂಪಣೆ ಮಾಡುವ ಆ್ಯಂಕರ್ಸ್ ಗಳ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಟಾರ್ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಅವರ ಹೆಸರನ್ನು ಕೈಬಿಡಲಾಗಿದೆ.
ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ. 6 ತಿಂಗಳು ತಡವಾಗಿ ಐಪಿಎಲ್ ಆರಂಭವಾಗುತ್ತಿದೆ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‍ಗಾಗಿ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಬಿಸಿಸಿಐ ಕೂಡ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನ ಹೊರತು ಪಡಿಸಿ ಪ್ರಪಂಚದ 120 ದೇಶದಲ್ಲಿ ಐಪಿಎಲ್ ಪ್ರಸಾರವಾಗಲಿದೆ.
ಐಪಿಎಲ್-2020 ಮೊದಲ ಪಂದ್ಯ ನಾಳೆ ಆರಂಭವಾಗಲಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸ್ಟಾರ್ ಸ್ಪೋರ್ಟ್ಸ್ ರಂಗುರಂಗಾಗಿ ಮಾತನಾಡುವ ನಿರೂಪಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಹಿಂದೆ ಐಪಿಎಲ್‍ನಲ್ಲಿ ನಿರೂಪಣೆ ಮಾಡುತ್ತಿದ್ದ ಸ್ಟಾರ್ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವರನ್ನು ಕೈಬಿಡಲು ಕಾರಣವೇನು ಎಂಬುದನ್ನು ಸ್ಟಾರ್ ಸ್ಪೋರ್ಟ್ಸ್ ತಿಳಿಸಿಲ್ಲ. ಇದರ ಬಗ್ಗೆ ಮಾಯಂತಿ ಲ್ಯಾಂಗರ್ ಕೂಡ ಇಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.
ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ನಿರೂಪಕರ ಪಟ್ಟಿ
ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಮಾಯಂತಿ ಲ್ಯಾಂಗರ್ ಕಾಣದಿರುವುದು ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್‍ವರ್ಕ್‍ನೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್‍ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.