ಉಡುಪಿ: ಜಿಲ್ಲೆಯ ಸಾಸ್ತಾನ ಸಮೀಪದ ಮಾಬುಕಳದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸಾಸ್ತಾನದ ರುಚಿ ಬೇಕರಿ ವಸ್ತುಗಳ ಉತ್ಪನ್ನ ಘಟಕದಲ್ಲಿ ಸ್ಪೋಟವಾಗಿದೆ. ಮಾಲೀಕ ರಾಬರ್ಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಬರ್ಟ್ ಫುಟ್ರಾಡೋ ಅವರ ಬೇಕರಿ ತಿನಿಸು ತಯಾರಿಸುವ ಘಟಕ ಹೊಂದಿದ್ದು, ಬೃಹತ್ ಗಾತ್ರದ ಓಲೆ ಬೆಳಗ್ಗೆ ಸ್ಫೋಟಗೊಂಡಿದೆ. ಓಲೆಯ ಕಾರ್ಯನಿರ್ವಹಣೆಗೆ ಸಮೀಪಕ್ಕೆ ತೆರಳಿದ್ದ ಸಂದರ್ಭವೇ ಸ್ಪೋಟ ಸಂಭವಿಸಿದೆ. ಒಲೆಯ ಕಬ್ಬಿಣದ ಬಾಗಿಲು ಹಾರಿ ಅವರ ಮೇಲೆ ಬಿದ್ದಿದೆ. ರಾಬರ್ಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಸುತ್ತಮುತ್ತಲ ಕಟ್ಟಡಗಳಿಗೆ ಬೆಂಕಿ ಆವರಿಸದಂತೆ ಮುನ್ನೆಚ್ಚರಿಕೆ ವಹಿಸಿದರು. ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ಸಾಸ್ತಾನ ನಿವಾಸಿ ಮಿಕ್ಕೆಲ್ ಮಾತನಾಡಿ, ಮೇಲ್ನೋಟಕ್ಕೆ ಓವನ್ ಸ್ಪೋಟವಾದಂತೆ ಕಾಣುತ್ತದೆ. ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದೆ ಎಂದು ಕೆಲವರು ಹೇಳುತ್ತಾರೆ. ಪೊಲೀಸರ ತನಿಖೆ ಆರಂಭವಾಗಿದೆ. ರಾಬರ್ಟ್ ಅವರು ಹಲವಾರು ವರ್ಷಗಳಿಂದ ಬೇಕರಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು ಉಡುಪಿ ಕುಂದಾಪುರ ಭಾಗದಲ್ಲಿ ಹೆಸರುವಾಸಿಯಾಗಿದ್ದರು. ಬೇಕರಿಗಳಿಗೆ ಆಹಾರ ವಸ್ತುಗಳನ್ನು ಸಪ್ಲೈ ಮಾಡುತ್ತಿದ್ದರು ಎಂದು ಹೇಳಿದರು.