ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ವಿವಾದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಿರು ಸರ್ಜಾ ಸಾವಿನ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಜಾ ಕುಟುಂಬ ಇಂದ್ರಜಿತ್ ಲಂಕೇಶ್ ಮೇಲೆ ಕಾನೂನು ಸಮರಕ್ಕೆ ನಿಂತಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ: ಇಂದ್ರಜಿತ್ ಲಂಕೇಶ್
ಸರ್ಜಾ ಕುಟುಂಬದಸ್ಥರು ಈ ಸಂಬಂಧ ಖ್ಯಾತ ವಕೀಲರೊಬ್ಬರನ್ನು ಸಂಪರ್ಕ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಸಾವಿನ ವಿಚಾರ ಎಳೆದು ತಂದಿದ್ದಕ್ಕೆ ಸರ್ಜಾ ಕುಟುಂಬದವರು ಇಂದ್ರಜಿತ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಮವಾರ ಸ್ಯಾಂಡಲ್‍ವುಡ್‍ನಲ್ಲಿ ಯಾರಿಗೆಲ್ಲಾ ಡ್ರಗ್ಸ್ ನಂಟಿದೆ, ಯಾರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಅನ್ನೋದರ ಬಗ್ಗೆ ಇಂದ್ರಜಿತ್ ಸಿಸಿಬಿ ಪೊಲೀಸರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ತುಂಬಾ ಬೇಸರವಾಯ್ತು: ದರ್ಶನ್
ಇದೇ ವೇಳೆ ಮಾತನಾಡಿದ್ದ ಇಂದ್ರಜಿತ್, ಯುವ ನಟ ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆ ಕುರಿತು ನಾನು ಹೇಳಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಹೇಳಿದ್ದರು.
ಚಿರಂಜೀವಿ ಸರ್ಜಾ ಯುವ ನಟರಾಗಿದ್ದು, ಆದ್ದರಿಂದಲೇ ನಾನು ಹೇಳಿದ್ದೆ. ಅವರು ಈಗ ಇದ್ದಿದ್ದರೆ ಮೇಘನಾ ಅವರು ಖುಷಿಯಿಂದ ಇರುತ್ತಿದ್ದರು. ಸತ್ತವರ ಬಗ್ಗೆ ಮಾತನಾಡಬಾರದು. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದರು.