ಚಾಮರಾಜನಗರ: ಮಹದೇಶ್ವರನ ಮೇಲೆ ಗಾಯಕಿ ಅನನ್ಯ ಭಟ್ ಹಾಡಿರುವ ಸೋಜುಗಾದ ಸೂಜಿ ಮಲ್ಲಿಗೆ ಹಾಡು ಸೂಪರ್ ಹಿಟ್ ಆಗಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಇದೀಗ ಮಹಿಳಾ ಡಿವೈಎಸ್‍ಪಿ ಒಬ್ಬರು ಹಾಡಿರುವ ಸೋಜುಗಾದ ಸೂಜಿ ಮಲ್ಲಿಗೆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಇದೇ ತಿಂಗಳು 25ರಂದು ಸಿಎಂ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದೋಬಸ್ತ್ ಪೂರ್ವ ಪರಿಶೀಲನೆಗೆ ಹಿರಿಯ ಅಧಿಕಾರಿಗಳೊಂದಿಗೆ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಸಹ ಭೇಟಿ ನೀಡಿದ್ದರು. ಈ ವೇಳೆ ಮಹದೇಶ್ವರನ ದರ್ಶನ ಪಡೆದ ನಂತರ ಭಕ್ತಿಪರವಶರಾದ ಪ್ರಿಯದರ್ಶನಿ ಗರ್ಭಗುಡಿಯಿಂದ ಹೊರಬಂದು ದೇಗುಲದ ಆವರಣದಲ್ಲೇ ಹಾಡಿ ಎಲ್ಲರ ಗಮನಸೆಳೆದಿದ್ದಾರೆ.
ಮಹಿಳಾ ಡಿವೈಎಸ್ಪಿ ಹಾಡಿದ ಸೋಜಿಗಾದ ಸೂಜುಮಲ್ಲಿಗೆ ಹಾಡು ಜೊತೆಯಲ್ಲಿದ್ದ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಲ್ಲರೂ ತಲೆ ತೂಗುವಂತೆ ಮಾಡಿದೆ. ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಸುಮಧುರ ಗಾನಕ್ಕೆ ಮನಸೋತ ಅಡಿಷನಲ್ ಎಸ್ಪಿ ಅನಿತಾ ಹದ್ದಣ್ಣನವರ್ ಹಾಡು ಪೂರ್ತಿ ಆಗುವವರೆಗೂ ನಿಂತು ಕೇಳಿದ್ದಾರೆ. ಜೊತೆಗೆ ನೆರೆದಿದ್ದ ಪೊಲೀಸ್ ಸಿಬ್ಬಂದಿ ತಮ್ಮ ಹಿರಿಯ ಮಹಿಳಾ ಅಧಿಕಾರಿಯ ಹಾಡಿಗೆ ಫಿದಾ ಆಗಿ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
ಇದೀಗ ಡಿವೈಎಸ್ಪಿ ಪ್ರಿಯದರ್ಶನಿ ಅವರ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯದರ್ಶನಿ ಸಾಣೆಕೊಪ್ಪ ನಾಲ್ಕು ದಿನಗಳ ಹಿಂದೆ ತಾನೇ ಚಾಮರಾಜನಗರ ವಿಭಾಗದ ಡಿವೈಎಸ್‍ಪಿ ಆಗಿ ವರ್ಗಾವಣೆ ಆಗಿ ಬಂದಿದ್ದಾರೆ.