ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟವನ್ನು ಬಂದ್ ಮಾಡುವಂತೆ ಇದೀಗ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ದಿನನಿತ್ಯ ಸಾವಿರಾರು ಜನರು ಮಲೆ ಮಹದೇಶ್ವರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಜನರು ಭಾಗಿಯಾಗಿದ್ದಾರೆ.
ದಿನೇ ದಿನೇ ರಾಜ್ಯದಲ್ಲಿ ಮತ್ತು ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಿದೆ. ಈ ಮಧ್ಯೆ ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟಕ್ಕೆ ಭಕ್ತರು ಬರುತ್ತಿದ್ದಾರೆ. ಬೆಟ್ಟದಲ್ಲಿ ಕೇವಲ ದೇವಾಲಯಕ್ಕೆ ಪ್ರವೇಶ ಮಾಡುವಾಗ ಮಾತ್ರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಮೈಸೂರು, ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಇದುವರೆಗೂ ಬೆಟ್ಟದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಕೊರೊನಾ ಪ್ರಕರಣ ಕಡಿಮೆಯಾಗುವವರೆಗೂ ಹೊರಗಿನವರಿಗೆ ಪ್ರವೇಶ ನೀಡಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಬಾಗಿಲು ಬಂದ್ ಮಾಡುವಂತೆ ಕೆಲ ಕಾಲ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.