– ಯಾದಗಿರಿ ಜನರಿಗೆ ಕೈ ಕೊಟ್ಟ ಸರ್ಕಾರ
ಯಾದಗಿರಿ: ಮೊದಲ ಬಾರಿಗೆ ಸಿಎಂ ಆಗಿದ್ದ ವೇಳೆ ಯಾದಗಿರಿಯನ್ನು ರಾಜ್ಯದ 30ನೇಯ ಜಿಲ್ಲೆಯಾಗಿ ಮಾಡಿದ್ದ ಸಿಎಂ ಯಡಿಯೂರಪ್ಪ, ಕಡಿಮೆ ಅವಧಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಮಾಡುತ್ತೆನೆಂದು ಜನರಿಗೆ ಮಾತು ಕೊಟ್ಟಿದ್ದರು.
ಈ ಮಾತನ್ನು ಮುಖ್ಯಮಂತ್ರಿಗಳು ಈಗ ಸಂಪೂರ್ಣವಾಗಿ ಮರೆತಿದ್ದು, ಕುಂಟು ನೆಪ ಹೇಳಿ ಜಿಲ್ಲೆಯ ಅಭಿವೃದ್ಧಿಗೆ ಸ್ವತಃ ಅವರೇ ಕೊಡಲಿ ಪೆಟ್ಟನ್ನು ನೀಡುತ್ತಿದ್ದಾರೆ. ಯಾದಗಿರಿ ಜಿಲ್ಲೆ ಈಗಾಗಲೇ ಭಾರತ ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಶೈಕ್ಷಣಿಕ ಮಹತ್ವಾಕಾಂಕ್ಷೆಯ ಜಿಲ್ಲೆ ಎನ್ನಿಸಿಕೊಂಡಿದೆ. ಎಲ್ಲ ಮಾದರಿಯ ಪರೀಕ್ಷೆಗಳಲ್ಲಿ ಜಿಲ್ಲೆ ಶೈಕ್ಷಣಿಕ ಮಟ್ಟದಲ್ಲಿ ಕೊನೆ ಸ್ಥಾನದಲ್ಲಿದೆ.
ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಜ್ಞಾನ ಕೇಂದ್ರ ಆರಂಭ ಮಾಡಲು, ವಿಜ್ಞಾನ ಪರಿಷತ್ತು ಸಂಸ್ಥೆಗೆ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಆದರೆ ಈಗ ಬಿಡುಗಡೆ ಮಾಡಿದ್ದ ಅನುದಾನವನ್ನು ಹಾಗೂ ಅನುದಾನಕ್ಕೆ ಇಲ್ಲಿಯವರಗೆ ದೊರೆತ ಬ್ಯಾಂಕ್ ಬಡ್ಡಿಯನ್ನು ವಾಪಸ್ ರಾಜ್ಯ ಸರ್ಕಾರದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೆಂದು ಅಪಾರ ಮುಖ್ಯಕಾರ್ಯದರ್ಶಿ ಅವರು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈಗ ಜಿಲ್ಲೆಗೆ ಮಂಜೂರಾಗಿದ್ದ ವಿಜ್ಞಾನ ಕೇಂದ್ರವನ್ನು ಕೂಡ ಕೈಬಿಟ್ಟಿದ್ದು ಮತ್ತಷ್ಟು ಶೈಕ್ಷಣಿಕ ಮಟ್ಟದ ಹಿನ್ನೆಡೆಗೆ ಕಾರಣವಾಗಲಿದೆ.
ಜಿಲ್ಲೆಗೆ ಮಂಜೂರಾಗಿದ್ದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಬಿಎಸ್‍ವೈ ಸರ್ಕಾರ ಕೋವಿಡ್ ಆರ್ಥಿಕ ಸಂಕಷ್ಟದ ನೆಪ ಹೇಳಿ ವಾಪಸ್ ಪಡೆದಿದೆ. ಈಗಾಗಲೇ ಯಾದಗಿರಿ ನಗರದ ಹೊರಭಾಗದ ಮುಂಡರಗಿಯಲ್ಲಿ 10 ಎಕರೆ ಜಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಮಂಜೂರು ಪಡೆಯಲಾಗಿತ್ತು. ಈಗ ಏಕಾಏಕಿ ಹಣಕಾಸಿನ ಕೊರತೆ ಹಾಗೂ ವಿವಿಧ ಕಾರಣಗಳಿಟ್ಟುಕೊಂಡು ವಿಜ್ಞಾನ ಕೇಂದ್ರ ಕೈಬಿಟ್ಟಿರುವುದಕ್ಕೆ ಜಿಲ್ಲೆಯ ಜನರ ಅಕ್ರೋಶ ವ್ಯಕ್ತಪಡಿಸಿದ್ದಾರೆ.